ಅಶೋಕ್ ಖೇಣಿಯನ್ನು ಕೂಡಲೇ ಬಂಧಿಸಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗ್ರಹ!

(santhoshvani.com)

ಬೆಂಗಳೂರು: ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾಗಿದ್ದ ಶಿವಕುಮಾರ ಮಹಾಸ್ವಾಮೀಜಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ನೈಸ್ ಗುತ್ತಿಗೆದಾರ ಅಶೋಕ್ ಖೇಣಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಇಂತಹ ವಂಚಕ ವ್ಯಕ್ತಿಗೆ ಈ ರಾಜ್ಯದ ಮುಖ್ಯಮಂತ್ರಿ ರಕ್ಷಣೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಅವರೊಂದಿಗೆ ಶಾಮೀಲಾಗಿ ತಕ್ಕದಲ್ಲದ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಅಶೋಕ್ ಖೇಣಿ ಅವರು ಸಿದ್ಧಗಂಗಾ ಮಠದ ಆಸ್ತಿಯನ್ನು ಕೂಡ ಲೂಟಿ ಮಾಡಿದ್ದು, ಇಂತಹ ಧರ್ಮದ್ರೋಹಿಗೆ ಡಿಕೆಶಿ ಸಹಕಾರ ಕೊಡುತ್ತಾ ಬಂದಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಬೆಂಗಳೂರಿನ ಹೊಸಕೆರೆಹಳ್ಳಿ ಟೋಲ್ ಬಳಿ ಇರುವ ಶೋಭಾ ಅಪಾರ್ಟ್‌‌ಮೆಂಟ್ ಯಾರದ್ದು ಎಂದು ಪ್ರಶ್ನಿಸಿರುವ ಅವರು, ಅದಕ್ಕೂ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕುಟುಂಬ ಹಾಗೂ ಅವರ ಸಹೋದರ ಡಿ.ಕೆ. ಸುರೇಶ್ ಅವರಿಗೂ ಏನು ಸಂಬಂಧ ಎಂದು ಕೇಳಿದ್ದಾರೆ. ಅಮಾಸೇಗೌಡ, ಭಾಗ್ಯಲಕ್ಷ್ಮಿ, ಕೆಂಪೇಗೌಡ ಎನ್ನುವರು ಯಾರು ಎಂದು ಪ್ರಶ್ನಿಸಿರುವ ಅವರು, ಈ ಮುಖ್ಯಮಂತ್ರಿಗಳು ತಮ್ಮ ತಂದೆ ಹಾಗೂ ತಾಯಿ ಹೆಸರಿಗೆ ಆ ಭೂಮಿಯನ್ನು ಖರೀದಿಸಿದ್ದು ಹೇಗೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಮ್ಮೆ ಸರ್ಕಾರಿ ಯೋಜನೆಗೆ ನೋಟಿಫೈ ಆಗಿರುವ ಭೂಮಿಯನ್ನು ಇವರು ಖರೀದಿಸಲು ಹೇಗೆ ಸಾಧ್ಯವಾಯಿತು ಮತ್ತು ಅಲ್ಲಿ ಗಗನಚುಂಬಿ ಶೋಭಾ ಅಪಾರ್ಟ್‌ಮೆಂಟ್ ಮೂಲಕ ಎರಡು ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೇಗೆ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ನೈಸ್ ರಸ್ತೆ ಪಕ್ಕದಲ್ಲಿರುವ ಸ್ವಾಧೀನ ಆಗಿರುವ ಭೂಮಿಗೆ ಬಡವರಿಗೆ ಯಾರಿಗೂ ಈ ನೈಸ್ ಕಂಪನಿ ಗುತ್ತಿಗೆದಾರರು ಎನ್‌‌ಒಸಿ ಕೊಟ್ಟಿಲ್ಲ ಹಾಗೂ ಸಿದ್ಧಗಂಗಾ ಮಠಕ್ಕೆ ಎನ್‌ಒಸಿ ನಿರಾಕರಿಸಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಆದರೆ, ಈ ರಸ್ತೆಯ ಸುತ್ತಮುತ್ತಲಿನ ನೂರಾರು ಎಕರೆ ಭೂಮಿಯನ್ನು ಮುಖ್ಯಮಂತ್ರಿ ಹಾಗೂ ಅವರ ಪರಿವಾರ ಖರೀದಿಸಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಅನ್ಯಾಯದ ಮಾರ್ಗದಲ್ಲಿ ಕಸಿದುಕೊಂಡು, ಬೆದರಿಸಿ ಭೂಮಿಯನ್ನು ಕಿತ್ತುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಮಿತಿ ಮೀರಿದ ದುರಾಶೆ ಮತ್ತು ಭೂದಾಹದಿಂದಾಗಿ ಇಡೀ ನೈಸ್ ರಸ್ತೆ ಯೋಜನೆಯೇ ಸ್ವಾಹಾ ಆಗುವ ಅಪಾಯ ಎದುರಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ.







Santhoshvani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು