ಹುಕ್ಕೇರಿ ಅಂಗನವಾಡಿ ಹುದ್ದೆಗಳ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಹಣ ವಸೂಲಿ ಸಿಡಿಪಿಒಗೆ ಶೋಕಾಸ್ ನೋಟಿಸ್ ಜಾರಿ!


(Santhoshvani.com)

ಹುಕ್ಕೇರಿ: ತಾಲ್ಲೂಕಿನಲ್ಲಿ ಪ್ರಕಟಗೊಂಡಿರುವ ವಿವಿಧ ಅಂಗನವಾಡಿ ಕೇಂದ್ರಗಳ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಆಕಾಂಕ್ಷಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಲಾಗಿದೆ ಎಂಬ ಗಂಭೀರ ದೂರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ವಿ. ರಾಮಮೂರ್ತಿ ಅವರಿಗೆ ತಾಲ್ಲೂಕು ಪಂಚಾಯಿತಿ ಇಒ ಟಿ.ಆರ್. ಮಲ್ಲಾಡದ ಅವರು ಅಧಿಕೃತವಾಗಿ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

​ಲಕ್ಷಾಂತರ ರೂಪಾಯಿ ಹಣ ವಸೂಲಿ ಹಾಗೂ ಮಧ್ಯವರ್ತಿಗಳ ಹಾವಳಿ:

ತಾಲ್ಲೂಕಿನಲ್ಲಿ ಹದಿನೆಂಟು ಕಾರ್ಯಕರ್ತೆಯರು ಹಾಗೂ ನಲ್ವತ್ತು ಮೀರಿದ ಸಹಾಯಕರ ಹುದ್ದೆಗಳಿಗೆ ನಡೆಯಬೇಕಿದ್ದ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳನ್ನು ವಂಚಿಸಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ನೇಮಕಾತಿ ಅಷ್ಟೇ ಅಲ್ಲದೆ, ಹಾಲಿ ಸಿಬ್ಬಂದಿಗಳ ವರ್ಗಾವಣೆ ಮತ್ತು ಮುಂಬಡ್ತಿ ಪ್ರಕ್ರಿಯೆಗಳಲ್ಲೂ ವ್ಯಾಪಕವಾಗಿ ಹಣ ಸಂಗ್ರಹಿಸಲಾಗಿದೆ ಎಂಬ ಸ್ಫೋಟಕ ಮಾಹಿತಿಯು ಮೇಲಧಿಕಾರಿಗಳ ಗಮನಕ್ಕೆ ಬಂದಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆಯು, ಮೂರು ದಿನಗಳ ಒಳಗಾಗಿ ಸೂಕ್ತ ಸ್ಪಷ್ಟನೆ ನೀಡುವಂತೆ ಎಚ್ಚರಿಕೆ ನೀಡಿದೆ. ತಪ್ಪಿದಲ್ಲಿ ಮೇಲಧಿಕಾರಿಗಳಿಗೆ ಹಾಗೂ ಸಮರ್ಥ ಪ್ರಾಧಿಕಾರಕ್ಕೆ ನೇರವಾಗಿ ವರದಿ ಸಲ್ಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

​ಇಲಾಖಾ ಮಟ್ಟದಲ್ಲಿ ಮುಗಿಲು ಮುಟ್ಟಿದ ಬಿಸಿ:

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಜಿಲ್ಲಾ ಹಾಗೂ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಮಗ್ರ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ಸೂಚನೆ ನೀಡಲಾಗಿದ್ದು, ಹಣ ವಸೂಲಿಗೆ ಇಳಿದಿರುವ ಭ್ರಷ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಬೆನ್ನು ಹತ್ತಿರುವ ಆಡಳಿತ ಯಂತ್ರವು ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.










Santhoshvani digital Daily News Network

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು