ಶಿಕ್ಷಣ ಮತ್ತು ಒಗ್ಗಟ್ಟಿನಿಂದ ಮಾತ್ರ ಹೂಗಾರ ಸಮುದಾಯದ ಸರ್ವಾಂಗೀಣ ಪ್ರಗತಿ ಸಾಧ್ಯ: ಸಚಿವ ಸತೀಶ ಜಾರಕಿಹೊಳಿ


(Santhoshvani.com)

ಬೆಳಗಾವಿ: ಬಸವಾದಿ ಶಿವಶರಣ ಹೂಗಾರ ಮಾದಯ್ಯನವರ ಆದರ್ಶ ಹಾಗೂ ಆಶಯಗಳ ಹಾದಿಯಲ್ಲಿ ಸಾಗಿ ಹೂಗಾರ ಸಮುದಾಯವು ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ರಂಗಗಳಲ್ಲಿ ಬಲಿಷ್ಠವಾಗಿ ಹೊರಹೊಮ್ಮಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕರೆ ನೀಡಿದ್ದಾರೆ.

​ನಗರದ ಕುಮಾರ ಗಂಧರ್ವ ಸಭಾಭವನದಲ್ಲಿ ಭಾನುವಾರ ಜಿಲ್ಲಾ ಹೂಗಾರ, ಪೂಜಾರ ಸೇವಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಸವಾದಿ ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಾದಿ ಶರಣರ ಕಾಲದಿಂದಲೂ ಹೂಗಾರ ಸಮುದಾಯವು ಪ್ರಾಮಾಣಿಕ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬಂದಿದೆ ಎಂದು ಸ್ಮರಿಸಿದ ಸಚಿವರು, ‘ಕಾಯಕವೇ ಕೈಲಾಸ’ ಎಂಬ ದಿವ್ಯ ತತ್ವವೇ ಸಮುದಾಯದ ಮೂಲ ಆಶಯವಾಗಿದೆ ಎಂದರು. ಸಮಾಜದಲ್ಲಿ ಎಲ್ಲ ವರ್ಗಗಳಿಗೂ ಸಮಾನ ಅವಕಾಶಗಳು ಲಭ್ಯವಾಗದ ಹಿನ್ನೆಲೆಯಲ್ಲಿ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸದೃಢರಾಗುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಜಾತಿ ವ್ಯವಸ್ಥೆಯಿಂದ ಸಮಾಜವು ವಿಭಜನೆಗೊಂಡಿದ್ದು, ಬಸವಾದಿ ಶರಣರು ತಮ್ಮ ಕ್ರಾಂತಿಕಾರಿ ಚಿಂತನೆಗಳ ಮೂಲಕ ಎಲ್ಲರನ್ನೂ ಒಂದುಗೂಡಿಸಲು ಶ್ರಮಿಸಿದ್ದರು ಎಂದು ಸತೀಶ ಜಾರಕಿಹೊಳಿ ತಿಳಿಸಿದರು. ಶರಣರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಜಯಂತಿ ಆಚರಣೆಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಸಮಾಜಮುಖಿ ಕಾರ್ಯಗಳಿಗೆ ಸದಾ ಸ್ಪೂರ್ತಿಯಾಗಬೇಕು ಎಂದ ಅವರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಹಾಗೂ ಯುವಜನರನ್ನು ಶಿಕ್ಷಣವಂತರನ್ನಾಗಿ ರೂಪಿಸುವ ನಿಟ್ಟಿನಲ್ಲಿ ತಮ್ಮ ಬೆಂಬಲ ಸದಾ ಇರಲಿದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಶಿವಾನಂದ ಹೂಗಾರ, ನಿತ್ಯ ಕಾಯಕದಲ್ಲಿ ನಿರತರಾಗಿರುವ ಶಿವಶರಣ ಹೂಗಾರ ಸಮುದಾಯವು ಇಂದಿಗೂ ಆರ್ಥಿಕವಾಗಿ ಹಿಂದುಳಿದಿದ್ದು, ಸರ್ಕಾರದ ಸೌಲಭ್ಯಗಳು ಹಾಗೂ ವಿಶೇಷ ಯೋಜನೆಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು. ಸಮಾರಂಭದಲ್ಲಿ ಕಾಗವಾಡ ಶ್ರೀ ಗುರುದೇವಾಶ್ರಮದ ಪರಮಪೂಜ್ಯ ಶ್ರೀ ಯತೀಶ್ವರಾನಂದ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್, ಶಾಸಕ ದುರ್ಯೋಧನ ಐಹೊಳೆ, ಮಾಜಿ ಶಾಸಕ ಅನಿಲ ಬೆನಕೆ, ಪ್ರಮುಖರಾದ ವಿಶ್ವನಾಥ ಪಾಟೀಲ, ಮಹಾದೇವ ಗುರವ್, ಗೀತಾ ಸುತಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.











Santhoshvani digital Daily News Network

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು