(Santhoshvani.com)
ಸಂಕೇಶ್ವರ: ಪಟ್ಟಣದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯ ಕಳೆದ ೨೦೨೩ರಿಂದ ಇಲ್ಲಿವರೆಗೆ ಮೂರು ವರ್ಷ ಕಳೆದರೂ ಪೂರ್ಣಗೊಂಡಿಲ್ಲ ಎಂದು ಟೀಕಿಸಿರುವ ಕನ್ನಡಪರ ಹೋರಾಟಗಾರರು, ವೀರರಾಣಿ ಚೆನ್ನಮ್ಮ ಯಾರದೋ ಆಸ್ತಿಯಲ್ಲ ಮತ್ತು ನಾಡಿನ ಮಹಾಪುರುಷರನ್ನು ಒಂದು ಸಮಾಜಕ್ಕೆ ಸೀಮಿತ ಮಾಡಿದ್ದು ಮೂರ್ಖತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಕರೆಯಲಾದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹೇಶ್ ಹಟ್ಟಿಹೊಳಿ, ದಿಲೀಪ್ ಹೊಸಮನಿ, ಪ್ರಮೋದ ಹೊಸಮನಿ ಹಾಗೂ ಸಂತೋಷ ಮುಡಶಿ, ಈ ವಿಳಂಬ ಧೋರಣೆಯನ್ನು ನಾವು ಖಂಡಿಸುತ್ತೇವೆ ಎಂದಿದ್ದು, ಚೆನ್ನಮ್ಮಾಜಿಯನ್ನು ಒಂದು ಸಮಾಜಕ್ಕೆ ಸೀಮಿತ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ನವೆಂಬರ್ ೧ರ ಒಳಗೆ ಲೋಕಾರ್ಪಣೆಗೆ ಆಗ್ರಹ ಹಾಗೂ ಗಡವು:
ಪಟ್ಟಣದ ಯಾವುದೇ ಜನರನ್ನು ಈ ಪ್ರತಿಮೆ ಪ್ರತಿಷ್ಠಾಪನೆ ಮಾಡುವ ನಿಟ್ಟಿನಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ವೀರಶೈವ ಸಮಾಜದ ಕೆಲವು ಮುಖಂಡರು ತಾವೇ ಸಮಾಜದ ಪರವಾಗಿ ಕಾರ್ಯ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಕಾರ್ಯ ಮೂರು ವರ್ಷಗಳಿಂದ ಈವರೆಗೆ ಪೂರ್ಣಗೊಂಡಿಲ್ಲ. ವೀರಶೈವ ಸಮಾಜದಿಂದ ಈವರೆಗೆ ೨೦ ಲಕ್ಷ ೭೫ ಸಾವಿರ ಹಣ ಬಿಡುಗಡೆಯಾಗಿದ್ದು, ಪ್ರತಿಮೆ ನಿರ್ಮಾಣ ಕಾರ್ಯ ಯಾಕೆ ತಡೆಹಿಡಿಯಲಾಗಿದೆ ಎನ್ನುವುದನ್ನು ಪ್ರತಿಮೆ ನಿರ್ಮಾಣ ಮಾಡುತ್ತಿರುವ ಮುಖಂಡರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಇಲ್ಲಿನ ಜನರು ಪಟ್ಟಣದಲ್ಲಿ ಮಹಾಪುರುಷರ ಪ್ರತಿಮೆ ಪ್ರತಿಷ್ಠಾಪನೆ ಆಗಲಿ ಎನ್ನುವ ಬಹಳ ದಿನಗಳ ಬೇಡಿಕೆ ಹೊಂದಿದ್ದು, ಅದಕ್ಕಾಗಿ ಬರುವ ನವೆಂಬರ್ ೧ರ ವೇಳೆಗೆ ಚೆನ್ನಮ್ಮ ಪ್ರತಿಮೆ ಲೋಕಾರ್ಪಣೆ ಮಾಡಿ. ಪ್ರತಿಮೆ ನಿರ್ಮಾಣ ಮಾಡುತ್ತಿರುವ ಮುಖಂಡರ ವಿಚಾರಗಳು ಬೇರೆ ಬೇರೆ ಇದ್ದು, ಆ ಕಾರಣಕ್ಕಾಗಿ ನಾವು ಇಲ್ಲಿಯವರೆಗೆ ಮೌನವಾಗಿದ್ದೇವೆ ಮತ್ತು ನವೆಂಬರ್ ೧ರ ವರೆಗೆ ಗಡುವು ನೀಡುತ್ತಿದ್ದೇವೆ ಎಂದು ಎಚ್ಚರಿಸಿದ್ದಾರೆ. ಕೆಲವರು ವೀರರಾಣಿ ಚೆನ್ನಮ್ಮಾಜಿಯ ಪ್ರತಿಮೆ ಪ್ರತಿಷ್ಠಾಪನೆ ವಿಷಯವನ್ನು ಒಂದು ಸಮಾಜಕ್ಕೆ ಸೀಮಿತ ಮಾಡುತ್ತಿರುವುದು ಮೂರ್ಖತನದ ಪರಮಾವಧಿಯಾಗಿದ್ದು ಈ ಕಾರ್ಯ ಆಗಬಾರದು ಎಂದು ನುಡಿದರು. ಇಂದಿನ ಸುದ್ದಿಗೋಷ್ಠಿಯಲ್ಲಿ ಸಂತೋಷ ಮುಡಶಿ, ಮಹೇಶ್ ಹಟ್ಟಿಹೊಳಿ, ದಿಲೀಪ್ ಹೊಸಮನಿ, ಪ್ರಮೋದ ಹೊಸಮನಿ, ಸಂತೋಷ ಪಾಟೀಲ, ಗಣೇಶ ಪಾಟೀಲ, ಪಿಂಟು ಸೂರ್ಯವಂಶಿ, ಸುನೀಲಾ ಪಾಟೀಲ, ಪ್ರೀತಮ ಸುಮಾರಿ, ಮೋಶಿನ ಪಠಾನ, ಶಿವಶಂಕರ ಭೋಸಲೆ,ದುರದುಂಡಿ ಪಾಟೀಲ,ಇತರೆ ಮುಖಂಡರು ಕನ್ನಡಪರ ಹೋರಾಟಗಾರರು ಕಾರ್ಯಕರ್ತರು ಉಪಸ್ಥಿತರಿದ್ದರು.
Santhoshvani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್


0 ಕಾಮೆಂಟ್‌ಗಳು