ಉಪ್ಪಿನ ಬಳಕೆಗೆ ಕಡಿವಾಣ ಹಾಕಲು ಹೊಸ ಮಾರ್ಗಸೂಚಿ: ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾದ ಆರೋಗ್ಯ ಸಚಿವ ಯು.ಟಿ. ಖಾದರ್!

(Santhoshvani.com)

ಬೆಂಗಳೂರು: ಉಪ್ಪಿನ ಅತಿಯಾದ ಸೇವನೆಯಿಂದ ಉಂಟಾಗಬಹುದಾದ ಮಾರಣಾಂತಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಹೊಸ ಮಾರ್ಗಸೂಚಿ ಹೊರಡಿಸಲು ಮುಂದಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಅತಿಯಾದ ಉಪ್ಪು ಸೇವನೆ ಒಳ್ಳೆಯದಲ್ಲ ಎಂದಿದ್ದು, ಉಪ್ಪು ಸೇವನೆ ಕುರಿತು ಹೊಸ ಮಾರ್ಗಸೂಚಿ ತರಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿದ್ದಾರೆ.

​ಉಪ್ಪಿನ ಪ್ಯಾಕೆಟ್‌ಗಳ ಮೇಲೂ ಇರಲಿದೆ ಎಚ್ಚರಿಕೆ ಸಂದೇಶ:

ಆರೋಗ್ಯಕ್ಕೆ ಪೂರಕವಾದ ಉಪ್ಪು ಮಾತ್ರ ಮಾರುಕಟ್ಟೆಗೆ ಬರಬೇಕು ಎಂಬ ಉದ್ದೇಶದಿಂದ ಉಪ್ಪು ಸೇವನೆ ಕುರಿತು ಮಾರ್ಗಸೂಚಿ ತರಲು ನಿರ್ಧಾರ ಮಾಡಲಾಗಿದೆ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ. ಮದ್ಯದ ಬಾಟಲಿಗಳ ಮೇಲೆ 'ಆರೋಗ್ಯಕ್ಕೆ ಹಾನಿಕರ' ಎಂಬ ಎಚ್ಚರಿಕೆ ಸಂದೇಶ ಮುದ್ರಿಸುವ ಅಥವಾ ಅಂಟಿಸುವ ರೀತಿಯಲ್ಲೇ, ಇನ್ನು ಮುಂದೆ ಉಪ್ಪಿನ ಪ್ಯಾಕೆಟ್‌ಗಳ ಮೇಲೂ ಎಚ್ಚರಿಕೆ ಸ್ಟಿಕ್ಕರ್‌ಗಳನ್ನು ಹಾಕುವ ಗಂಭೀರ ಚಿಂತನೆ ಇದೆ ಎಂದು ಸಚಿವರು ಹೇಳಿದ್ದಾರೆ.

​ಔಷಧಿಯಂತೆ ಬಳಸಿ, ರಕ್ತದೊತ್ತಡ ನಿಯಂತ್ರಿಸಿ:

ಉಪ್ಪು ನಮ್ಮ ದೈನಂದಿನ ಆಹಾರದ ಪ್ರಮುಖ ಭಾಗವಾಗಿದ್ದರೂ, ಇದರ ಅತಿಯಾದ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಅತಿಯಾದ ಉಪ್ಪು ಸೇವನೆಯಿಂದ ರಕ್ತದೊತ್ತಡ ಬಿಪಿ ಹಾಗೂ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ. ಉಪ್ಪಿನ ದರ ದುಬಾರಿಯಾದರೂ ಚಿಂತೆಯಿಲ್ಲ, ಜನರು ಅದನ್ನು ಕಡಿಮೆ ಸೇವಿಸಬೇಕು ಮತ್ತು ಆರೋಗ್ಯಕ್ಕೆ ಪೂರಕವಾಗಿರಬೇಕು. ಎಷ್ಟು ಅಗತ್ಯವೋ ಅಷ್ಟು ಮಾತ್ರ ತೆಗೆದುಕೊಂಡು, ಉಪ್ಪನ್ನು ಔಷಧಿಯ ರೀತಿಯಲ್ಲಿ ಬಳಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

​ಉಪ್ಪಿನ ಪ್ಯಾಕೆಟ್ ಮೇಲೆ ಅತಿಯಾದ ಉಪ್ಪು ಸೇವನೆ ಮಾಡಿದರೆ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಮತ್ತು ರೋಗಗಳು ಬರುತ್ತವೆ ಎಂಬುದನ್ನು ಪ್ರಿಂಟ್ ಮಾಡಬೇಕು. ಜನರಿಗೆ ಇದರ ಅರಿವಿರಬೇಕು ಮತ್ತು ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ ಎಂದು ಖಾದರ್ ತಿಳಿಸಿದ್ದಾರೆ.

​ಶಾಲೆ-ಕಾಲೇಜುಗಳಿಗೂ ಪ್ರತ್ಯೇಕ ಮಾರ್ಗಸೂಚಿ:

ಜನರು ಆರೋಗ್ಯ ಇಲಾಖೆ ಹೇಳಿದ್ದನ್ನು ಕೇಳಬೇಕು ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶಾಲಾ-ಕಾಲೇಜುಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತಿದ್ದು, ತಜ್ಞರು ಸಂಶೋಧನೆ ನಡೆಸಿ ಮಾಹಿತಿ ಕೊಡಲಿದ್ದಾರೆ. ಆರೋಗ್ಯಕ್ಕೆ ಮಾರಕವಾದ ಯಾವುದೇ ಆಹಾರ ಪದ್ಧತಿಯನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.








Santhoshvani digital Daily News Network

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು