ಮೇಕೆದಾಟು ವಿಚಾರದಲ್ಲಿ ಕರ್ನಾಟಕದ ಕಠಿಣ ಹಾಗೂ ದಿಟ್ಟ ನಿರ್ಧಾರ: ದೆಹಲಿ ಮಟ್ಟದಲ್ಲಿ ಮಹತ್ವದ ಮಾತುಕತೆ


(Santhoshvani.com)

ನವದೆಹಲಿ:ಮಹತ್ವದ ಬೆಳವಣಿಗೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಸಮ ತೋಲನ ಜಲಾಶಯ ಯೋಜನೆಗೆ ವೇಗ ನೀಡಲು ಕರ್ನಾಟಕ ಸರ್ಕಾರ ತನ್ನ ಪ್ರಯತ್ನಗಳನ್ನು ಮತ್ತಷ್ಟು ಚುರುಕುಗೊಳಿಸಿದೆ.ರಾಜ್ಯ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಬುಧವಾರ ನವದೆಹಲಿಯಲ್ಲಿ ಕೇಂದ್ರ ಜಲ ಆಯೋಗದ (CWC) ಅಧ್ಯಕ್ಷ ಅನುಪಮ್ ಪ್ರಸಾದ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.

ಯೋಜನೆಗೆ ಅಗತ್ಯವಿರುವ ಕಾನೂನುಬದ್ಧ ಹಾಗೂ ತಾಂತ್ರಿಕ ಅನುಮೋದನೆಗಳು, ಮೇಕೆದಾಟು ಯೋಜನೆಯ ವಿಸ್ತ್ರತ ಯೋಜನಾ ವರದಿ (DPR) ಕುರಿತು ಈ ಹಿಂದೆ CWC ಎತ್ತಿದ್ದ ಆಕ್ಷೇಪಣೆಗಳು ಮತ್ತು ತಾಂತ್ರಿಕ ವಿಚಾರಗಳಿಗೆ ಪ್ರತಿಯಾಗಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಸಮಗ್ರ ಅನುಸರಣೆ ವರದಿ (Compliance Report) ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಯೋಜನೆಯ ತಾಂತ್ರಿಕ ತ್ವರಿತವಾಗಿ ಪರಿಶೀಲನೆಯನ್ನು ಪೂರ್ಣಗೊಳಿಸಲು ಹಾಗೂ ಅಗತ್ಯ ತಾಂತ್ರಿಕ ಸಹಕಾರ ಒದಗಿಸುವಂತೆ ಸಚಿವ ಚಲುವರಾಯಸ್ವಾಮಿ ಅವರು CWCಗೆ ಮನವಿ ಮಾಡಿದರು ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. 

ಪರಿಶೀಲನಾ ಪ್ರಕ್ರಿಯೆಯಲ್ಲಿ ಹೆಚ್ಚುವರಿ ತಾಂತ್ರಿಕ ಮಾಹಿತಿ ಅಥವಾ ಯಾವುದೇ ಸ್ಪಷ್ಟಿಕರಣದ ಅಗತ್ಯವಿದ್ದರೆ, ಜಲಸಂಪನ್ಮೂಲ ಇಲಾಖೆ ತಕ್ಷಣವೇ ಒದಗಿಸಲಿದೆ ಎಂದು ಸಚಿವರು CWCಗೆ ಭರವಸೆ ನೀಡಿದರು. ಇತ್ತೀಚೆಗೆ CWC ಸದಸ್ಯ ಯೋಗೇಶ್ ಪೈತಂಕರ್ ಅವರು ಮೇಕೆದಾಟು ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.

ಕರ್ನಾಟಕದ ನಿಯೋಗವು ಉದ್ದೇಶಿತ ಯೋಜನಾ ಸ್ಥಳದಲ್ಲಿನ ವಾಸ್ತವಿಕ ಭೌಗೋಳಿಕ ಪರಿಸ್ಥಿತಿಗಳ ಕುರಿತು ವಿವರಗಳನ್ನು ಹಂಚಿಕೊಂಡಿತು. ಅಲ್ಲದೆ, ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಗಮನಕ್ಕೆ ಬಂದ ತಾಂತ್ರಿಕ ಅಂಶಗಳ ಬಗ್ಗೆಯೂ ಚರ್ಚೆ ನಡೆಯಿತು.ಮೇಕೆದಾಟು ಬೆಂಗಳೂರಿನ ದೀರ್ಘಾವಧಿಯ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸುವಲ್ಲಿ ಯೋಜನೆಯ ಮಹತ್ವ ಹೆಚ್ಚುತ್ತಿದೆ ಎಂದು ಚಲುವರಾಯಸ್ವಾಮಿ ಸಭೆಯಲ್ಲಿ  ಒತ್ತಿ ಹೇಳಿದರು. ಹೆಚ್ಚುತ್ತಿರುವ ನೀರಿನ ಬೇಡಿಕೆ, ಮಳೆಯಲ್ಲಿನ ಏರಿಳಿತ ಹಾಗೂ ಕೆಲ ಅವಧಿಗಳಲ್ಲಿ ಎದುರಾಗುತ್ತಿರುವ ನೀರಿನ ಕೊರತೆಯ ಹಿನ್ನೆಲೆಯಲ್ಲಿ ಯೋಜನೆ ಅಗತ್ಯವಾಗಿದೆ ಎಂದು ಅವರು ವಿವರಿಸಿದರು.






Santhoshvani digital Daily News Network

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು