(Santhoshvani.com)
ಬೆಳಗಾವಿ: ಬಸವಕಲ್ಯಾಣದಲ್ಲಿ ಅತ್ಯಂತ ಪ್ರತಿಷ್ಠಿತವಾಗಿ ನಿರ್ಮಿಸಲಾಗುತ್ತಿರುವ ಭವ್ಯ 'ಅನುಭವ ಮಂಟಪ'ದ ಸಂಪೂರ್ಣ ನಿರ್ವಹಣೆಯನ್ನು ಜಾಗತಿಕ ಲಿಂಗಾಯತ ಮಹಾಸಭೆಗೆ ನೀಡುವಂತೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ನಡೆದ ಜಾಗತಿಕ ಲಿಂಗಾಯತ ಮಹಾಸಭೆಯ ವಾರ್ಷಿಕ ಸರ್ವಸಾಮಾನ್ಯ ಸಭೆ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿಯ ಸಭೆಯಲ್ಲಿ ಈ ನಿರ್ಣಯವನ್ನು ಒಕ್ಕೊರಲಿನಿಂದ ಅಂಗೀಕರಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಆರಂಭವಾದ ಈ ಬೃಹತ್ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಇದುವರೆಗೆ ೪೦೦ ಕೋಟಿ ರೂ.ಗಳಿಗೂ ಅಧಿಕ ಹಣ ಖರ್ಚಾಗಿದೆ. ಕಟ್ಟಡ ಸಂಪೂರ್ಣ ಮುಕ್ತಾಯಗೊಳ್ಳಲು ಇನ್ನೂ ಕನಿಷ್ಠ ೪೫೦ ಕೋಟಿ ರೂ.ಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಮುಂಬರುವ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದ್ದರೂ, ಪ್ರಸ್ತುತ ಮುಂಗಡಪತ್ರದಲ್ಲಿ ಅದಕ್ಕೆ ಅಗತ್ಯವಿರುವ ಅನುದಾನವನ್ನು ಒದಗಿಸಿಲ್ಲ. ಹೀಗಾಗಿ, ನಿಗದಿತ ಅವಧಿಗೆ ಕಾಮಗಾರಿ ಪೂರ್ಣಗೊಳ್ಳುವುದು ಅಸಾಧ್ಯವಾಗಿದ್ದು, ಯಾವುದೇ ಕಾರಣಕ್ಕೂ ಅಪೂರ್ಣ ಸ್ಥಿತಿಯಲ್ಲಿ ಕಟ್ಟಡವನ್ನು ಉದ್ಘಾಟನೆ ಮಾಡಲು ಅವಕಾಶ ನೀಡಬಾರದು ಎಂದು ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಯಿತು.
ಕಟ್ಟಡ ಪೂರ್ಣಗೊಂಡ ನಂತರ ಅಲ್ಲಿ ನಡೆಯಬೇಕಾದ ಚಟುವಟಿಕೆಗಳು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ರೂಪುರೇಷೆಗಳ ನಿರ್ಧಾರವನ್ನು ಜಾಗತಿಕ ಲಿಂಗಾಯತ ಮಹಾಸಭೆಗೆ ಬಿಡಬೇಕು ಎಂದು ಡಿಸೆಂಬರ್ ಅಂತ್ಯದೊಳಗೆ ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಸಿಖ್ ಧರ್ಮದ ಪವಿತ್ರ ಕ್ಷೇತ್ರವಾದ ಅಮೃತಸರದ 'ಸ್ವರ್ಣ ಮಂದಿರ'ದ ಮಾದರಿಯಲ್ಲಿಯೇ ಅನುಭವ ಮಂಟಪದಲ್ಲಿಯೂ ನಿರಂತರ ಚಟುವಟಿಕೆಗಳು ನಡೆಯಬೇಕು. ಅದರ ಅಧ್ಯಯನಕ್ಕಾಗಿ ಮಹಾಸಭೆಯ ಪದಾಧಿಕಾರಿಗಳು ಸುವರ್ಣ ಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಮಾದಾರ್ ಮಾತನಾಡಿ, ಅಂದು ಅನುಭಾವಿಗಳಿಂದ ಸ್ಥಾಪನೆಗೊಂಡಿದ್ದ ಅನುಭವ ಮಂಟಪದಲ್ಲಿ ಮೌಲಿಕ ಚರ್ಚೆಗಳು ನಡೆಯುತ್ತಿದ್ದವು. ಈಗಲೂ ಅದರ ಪಾವಿತ್ರ್ಯತೆ ಮತ್ತು ಗೌರವಕ್ಕೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ನಿರ್ವಹಣೆ ವ್ಯವಸ್ಥೆ ರೂಪುಗೊಳ್ಳಬೇಕು ಎಂದರು. ಎನ್.ಎಸ್. ಕೆಂಪಗೌಡರ್ ಅಧ್ಯಕ್ಷತೆ ವಹಿಸಿದ್ದ ಈ ಸಭೆಯಲ್ಲಿ ವಿವಿಧ ಮಠಾಧೀಶರು, ಬಸವಪರ ಸಂಘಟನೆಗಳ ಮುಖಂಡರು ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Santhoshvani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್


0 ಕಾಮೆಂಟ್‌ಗಳು