ಜಿಪಂ ಸಿಇಒ ದಿಢೀರ್ ರಿಯಾಲಿಟಿ ಚೆಕ್: ಕಚೇರಿಗೆ ತಡವಾಗಿ ಬಂದ ಸಿಬ್ಬಂದಿಗೆ ಗೇಟ್ ಬಂದ್ ಮಾಡಿ ಶಾಕ್!

(Santhoshvani.com)

ಬೀದರ್: ಕಚೇರಿಗೆ ಸರಿಯಾದ ಸಮಯಕ್ಕೆ ಬಾರದೆ ಕರ್ತವ್ಯ ಲೋಪ ಎಸಗುತ್ತಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕಠಿಣ ಕ್ರಮ ಕೈಗೊಂಡಿರುವ ಘಟನೆ ಬೀದರ್‌ನಲ್ಲಿ ನಡೆದಿದೆ. ಕಚೇರಿಗೆ ಹಸ್ತಾಂತರಿಸಿದ ಅವಧಿಯೊಳಗೆ ಬಾರದೆ ತಡವಾಗಿ ಆಗಮಿಸುತ್ತಿರುವವರ ವಿರುದ್ಧ ಕ್ರಮ ವಹಿಸಲು ಜಿಪಂ ಸಿಇಒ ಗಿತ್ತೆ ಮಾದವ್ ವಿಠಲರಾವ್ ಅವರು ಸ್ವತಃ ಕಚೇರಿಗೆ ದಿಢೀರ್ ಭೇಟಿ ನೀಡಿ ವಾಸ್ತವ ಪರಿಶೀಲನೆ ರಿಯಾಲಿಟಿ ಚೆಕ್ ನಡೆಸಿದ್ದಾರೆ. ಈ ವೇಳೆ ಕಚೇರಿಯ ಪ್ರಮುಖ ಗೇಟ್ ಅನ್ನು ಬಂದ್ ಮಾಡಿಸಿ, ಲೇಟಾಗಿ ಬಂದವರಿಗೆ ಬಿಸಿ ಮುಟ್ಟಿಸಿದ್ದಾರೆ.

ಕಚೇರಿ ಒಳಗೆ ತೆರಳಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಹಲವು ಮೇಜಿನ ಕುರ್ಚಿಗಳು ಖಾಲಿಯಿರುವುದನ್ನು ಕಂಡು ಸಿಇಒ ದಂಗಾಗಿದ್ದಾರೆ. ತಕ್ಷಣವೇ ಗೇಟ್ ಬಳಿ ಬಂದು ನಿಂತು ತಡವಾಗಿ ಬಂದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ತವ್ಯ ಆ್ಯಪ್ ಬಳಕೆ ಕಡ್ಡಾಯವಿದ್ದರೂ ಕೂಡ ಯಾಕೆ ತಡ ಮಾಡಿದ್ದೀರಿ ಮತ್ತು ನೀವು ಫೀಲ್ಡ್‌ಗೆ ತೆರಳಿದ್ದಲ್ಲಿ ಆ್ಯಪ್‌ನಲ್ಲಿ ಯಾಕೆ ನಮೂದಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಸಿಬ್ಬಂದಿಯಿಂದ ಯಾವುದೇ ಸಮಂಜಸವಾದ ಉತ್ತರ ಬಾರದ ಹಿನ್ನೆಲೆಯಲ್ಲಿ, ಕರ್ತವ್ಯಕ್ಕೆ ಅಸಡ್ಡೆ ತೋರಿದ ಕಾರಣಕ್ಕಾಗಿ ಅಂತಹ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಒಂದು ದಿನದ ವೇತನ ಕಡಿತಗೊಳಿಸುವುದಾಗಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ಸದ್ಯ ಜಿಪಂ ಸಿಇಒ ಅವರ ಈ ದಿಢೀರ್ ತಪಾಸಣೆ ಹಾಗೂ ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.












Santhoshvani digital Daily News Network

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು