(Santhoshvani.com)
ಬೆಳಗಾವಿ: ಉದ್ಯೋಗ ಹುಡುಕಾಟದಲ್ಲಿರುವ ರಾಜ್ಯದ ಯುವ ಜನತೆಗೆ ಮತ್ತೊಂದು ಗುಡ್‌ನ್ಯೂಸ್ ಇಲ್ಲಿದೆ. ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬಿಡಿಸಿಸಿ ಬ್ಯಾಂಕಿನಲ್ಲಿ ಖಾಲಿ ಇರುವ ಒಟ್ಟು ೧೪೦ ಹುದ್ದೆಗಳ ನೇಮಕಾತಿ ಪ್ರಕ್ರಿಗೆ ವೇದಿಕೆ ಸಿದ್ಧವಾಗಿದ್ದು, ಪರಿಷ್ಕೃತ ಪ್ರಸ್ತಾವನೆಯನ್ನು ಸರ್ಕಾರದ ಅನುಮೋದನೆಗೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ.
ಈ ಹಿಂದೆ ೧೦೪ ಹುದ್ದೆಗಳ ಭರ್ತಿಗಾಗಿ ಆರಂಭಿಸಲಾಗಿದ್ದ ನೇಮಕಾತಿ ಪ್ರಕ್ರಿಯೆಗೆ ಬರೋಬ್ಬರಿ ೨೧ ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ, ಮೀಸಲಾತಿ ಹಾಗೂ ವಿವಿಧ ಹುದ್ದೆಗಳಿಗೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆ ಸೇರಿದಂತೆ ಕೆಲವು ತಾಂತ್ರಿಕ ವಿಷಯಗಳು ಎದುರಾದ ಹಿನ್ನೆಲೆಯಲ್ಲಿ, ಸರ್ಕಾರದ ಸೂಚನೆಯಂತೆ ಅಗತ್ಯ ತಿದ್ದುಪಡಿಗಳನ್ನು ಮಾಡಿ ಈಗ ಒಟ್ಟು ೧೪೦ ಹುದ್ದೆಗಳಿಗೆ ಹೊಸ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಸರ್ಕಾರದ ಅನುಮೋದನೆ ದೊರೆತ ತಕ್ಷಣವೇ ಅಧಿಕೃತ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.
ಈ ಹಿಂದೆ ೧೦೪ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಸುಮಾರು ೨೧ ಸಾವಿರ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಅಣ್ಣಾಸಾಹೇಬ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ. ಹಳೆಯ ಅರ್ಜಿದಾರರ ಅರ್ಜಿಗಳನ್ನು ಹೊಸ ನೇಮಕಾತಿ ಪ್ರಕ್ರಿಯೆಯಲ್ಲೂ ಪರಿಗಣಿಸಲಾಗುತ್ತದೆ. ಆದಾಗ್ಯೂ, ಪರಿಷ್ಕೃತ ಮೀಸಲಾತಿ ಹಾಗೂ ಅರ್ಹತೆಯನ್ವಯ ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವ ಆಸಕ್ತರಿಗೂ ಹೊಸ ಅಧಿಸೂಚನೆಯ ಮೂಲಕ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಸರ್ಕಾರದಿಂದ ಅಧಿಕೃತ ಅನುಮೋದನೆ ಸಿಕ್ಕ ಕೂಡಲೇ ಹುದ್ದೆವಾರು ವಿದ್ಯಾರ್ಹತೆ, ಮೀಸಲಾತಿ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರಗಳನ್ನು ಪ್ರಕಟಿಸಲಾಗುತ್ತಿದ್ದು, ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಗಾಗಿ ಕಾಯುವಂತೆ ಸೂಚಿಸಲಾಗಿದೆ.
Santhoshvani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್


0 ಕಾಮೆಂಟ್‌ಗಳು