ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಿಸಿದ ಸಚಿವ ಲಕ್ಷ್ಮಣ ಸವದಿ

(santhoshvani.com)

​ಅಥಣಿ: ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತ್ಯಾದಿ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ 2026-27ನೇ ಸಾಲಿನಲ್ಲಿ ಮಂಜೂರಾದ ಒಟ್ಟು 1,118 ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್‌ಗಳನ್ನು ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ಪಟ್ಟಣದ ನಿರೀಕ್ಷಾಣ ಮಂದಿರದ ಆವರಣದಲ್ಲಿ ವಿತರಿಸಿದರು.

​ವಿವಿಧ ವೃತ್ತಿಗಳ ಕಾರ್ಮಿಕರಿಗೆ ಅನುಗುಣವಾಗಿ ಈ ಕಿಟ್‌ಗಳನ್ನು ವಿತರಿಸಲಾಗಿದ್ದು, ಇದರಲ್ಲಿ ಎಲೆಕ್ಟ್ರಿಷಿಯನ್ 167, ಪ್ಲಂಬರ್ 75, ಕಾರ್ಪೆಂಟರ್ 98, ಮೇಸನ್ 600, ವೆಲ್ಡರ್ 98 ಹಾಗೂ ಪೇಂಟರ್ 80 ಸೇರಿದಂತೆ ಒಟ್ಟು 1,118 ಕಾರ್ಮಿಕರು ಈ ಸೌಲಭ್ಯ ಪಡೆದರು.
​ಕಾರ್ಮಿಕರ ಸುರಕ್ಷತೆಗೆ ಸರ್ಕಾರದ ಪ್ರಾಮುಖ್ಯತೆ
​ಕಿಟ್ ವಿತರಿಸಿ ಮಾತನಾಡಿದ ಸಚಿವರು, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಮಿಕರು ಜೀವದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. 

ಅವರ ಸುರಕ್ಷತೆ ಮತ್ತು ಕಲ್ಯಾಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಕೆಲಸದ ಸ್ಥಳದಲ್ಲಿ ಅಪಘಾತ ತಡೆಯಲು ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ತಿಳಿಸಿದರು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ತಲುಪುವಂತೆ ಕ್ರಮ ವಹಿಸಲಾಗುವುದು ಎಂದರು.
​ಕಾರ್ಮಿಕರ ಮಕ್ಕಳ ಶಿಕ್ಷಣ ಹಾಗೂ ವಸತಿ ಶಾಲೆ
​ಕಾರ್ಮಿಕರ ಮಕ್ಕಳು ತಂದೆಯಂತೆ ಕಾರ್ಮಿಕರಾಗಿಯೇ ಉಳಿಯಬಾರದು. ಅವರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು ಎಂಬುದು ನಮ್ಮ ಆಶಯವಾಗಿದೆ. 

ಅದಕ್ಕಾಗಿ ಸತ್ತಿ ರಸ್ತೆಯಲ್ಲಿ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ ನಿರ್ಮಾಣಕ್ಕೆ ಈಗಾಗಲೇ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು. ಕಾರ್ಮಿಕರ ಮಕ್ಕಳ ಶಿಕ್ಷಣ, ಆರೋಗ್ಯ, ವಸತಿಗಾಗಿ ಮಂಡಳಿಯು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಅರ್ಹರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
​ಈ ವೇಳೆ ತಾಲೂಕು ಕಾರ್ಮಿಕ ಇಲಾಖೆ ಅಧಿಕಾರಿ ಭುವನೇಶ್ವರಿ ಧಾಲೆ, ಸಚಿನ್, ಕಾರ್ಮಿಕ ಇಲಾಖೆ ಸಿಬ್ಬಂದಿ, ಕಾರ್ಮಿಕ ಮುಖಂಡರು ಹಾಗೂ ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.












Santhoshvani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು