(santhoshvani.com)
ಬೆಳಗಾವಿ:ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ತಂತ್ರಜ್ಞಾನದ ಬೆಳವಣಿಗೆಯ ಸಂದರ್ಭದಲ್ಲಿ ಸೈಬರ್ ಸುರಕ್ಷತೆ ಮತ್ತು ಉದ್ಯಮಶೀಲತೆಯ ಮಹತ್ವವನ್ನು ಯುವಜನರು ಅರಿತುಕೊಳ್ಳಬೇಕು. ಉದ್ಯೋಗ ಹುಡುಕುವವರಾಗದೆ ಉದ್ಯೋಗ ಸೃಷ್ಟಿಸುವವರಾಗಬೇಕು ಎಂದು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.
ನಗರದ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಆವರಣದಲ್ಲಿ ಸ್ಟೀಮ್ ಎಚ್ ತರಬೇತಿ ಮತ್ತು ಸಂಶೋಧನಾ ಪ್ರತಿಷ್ಠಾನ, ಟಿ.ಎಲ್.ಎಸ್ ಹಾಗೂ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ 'ಅಗಮ್ಯ ಟೆಕ್ ಸಮ್ಮೇಳನ'ದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಆನ್‌ಲೈನ್ ಮೋಸ ಹಾಗೂ ವಂಚನೆಯ ಜಾಲಗಳನ್ನು ಗುರುತಿಸುವುದು ಮತ್ತು ಅವುಗಳಿಂದ ಸುರಕ್ಷಿತವಾಗಿರುವ ಮಾರ್ಗಗಳನ್ನು ತಿಳಿದುಕೊಳ್ಳುವುದು ಇಂದಿನ ಅಗತ್ಯವಾಗಿದೆ. ಉತ್ತರ ಕರ್ನಾಟಕದ ಯುವಕರು ತಂತ್ರಜ್ಞಾನ, ಸೈಬರ್ ಸುರಕ್ಷತೆ ಹಾಗೂ ಉದ್ಯಮಶೀಲತೆಯ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಂಡು ಮುನ್ನಡೆಯಬೇಕು ಎಂದು ಅವರು ಕರೆ ನೀಡಿದರು.
ಅಗಮ್ಯ ಸೈಬರ್‌ಟೆಕ್ ಸಂಸ್ಥಾಪಕ ಮಹೇಶ ವಸ್ತ್ರದ ಮಾತನಾಡಿ, ಉತ್ತರ ಕರ್ನಾಟಕದ ಯುವಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ಹಾಗೂ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ 2020ರಲ್ಲಿ ಅಗಮ್ಯ ಸೈಬರ್‌ಟೆಕ್
ಸಂಸ್ಥೆ ಸ್ಥಾಪಿಸಲಾಗಿದೆ. ಉದ್ಯೋಗ ಮತ್ತು ಅವಕಾಶಗಳಿಗಾಗಿ ಯುವಕರು ವಿದೇಶಗಳಿಗೆ ತೆರಳುವ ಬದಲು, ಉತ್ತರ ಕರ್ನಾಟಕದಲ್ಲಿಯೇ ಅವುಗಳನ್ನು ಸೃಷ್ಟಿಸುವತ್ತ ಗಮನಹರಿಸಬೇಕು ಎಂದರು.
ಆಕ್ಸಿಜನ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ ಪಾಟೀಲ ಮಾತನಾಡಿ, ಡೇಟಾ ಸುರಕ್ಷತೆ, ಮಾಹಿತಿ ಭದ್ರತೆ ಹಾಗೂ ಗ್ರಾಹಕರ ಯಶಸ್ಸಿನ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಉದ್ಯಮಿಯಾಗುವುದು ಸವಾಲಿನ ಕೆಲಸವಾದರೂ, ಸರಿಯಾದ ದೃಷ್ಟಿಕೋನ ಮತ್ತು ಪರಿಶ್ರಮದಿಂದ ಯಶಸ್ಸು ಸಾಧಿಸಬಹುದು ಎಂದು ಹೇಳಿದರು.ಕಾರ್ಯಕಾರಿ ಸಮಿತಿ ಸದಸ್ಯ ಪ್ರಕಾಶ ದವಾಡಿ ಮಾತನಾಡಿ, ಗ್ರಾಹಕರ ಸಮಸ್ಯೆಗಳನ್ನು ಸಮಯಕ್ಕೆ ಸರಿಯಾಗಿ ಪರಿಹರಿಸುವುದು ವ್ಯವಹಾರದ ಯಶಸ್ಸಿನ ಪ್ರಮುಖ ಅಂಶವಾಗಿದೆ ಎಂದರು.
ಗಿರೀಶ ಬಡಿಗೇರ ಸ್ವಾಗತಿಸಿದರು. ದೀಪಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಅಕ್ಷಯ ನಾಯಕ್ ವಂದಿಸಿದರು.ಕಾರ್ಯಾಗಾರದಲ್ಲಿ ಸೈಬರ್ ಸುರಕ್ಷತೆ, ಮಾಹಿತಿ ಭದ್ರತೆ, ಗ್ರಾಹಕರ ಯಶಸ್ಸು ಹಾಗೂ ಉದ್ಯಮಶೀಲತೆ ಕುರಿತು ಯುವಕರಿಗೆ ಮಾಹಿತಿ ನೀಡಲಾಯಿತು.
Santhoshovani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್


0 ಕಾಮೆಂಟ್‌ಗಳು