(santhoshvani.com)
ಬೆಂಗಳೂರು:ಕೆಪಿಎಸ್ಸಿ ಹಗರಣದಲ್ಲಿ ರಾಜ್ಯ ಸರ್ಕಾರ ನೇರವಾಗಿ ಭಾಗಿಯಾಗಿದ್ದು,ಐಎಎಸ್ ಅಧಿಕಾರಿ ನಾಪತ್ತೆಯ ಹಿಂದೆ ಸರ್ಕಾರದ ಕೈವಾಡವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗಂಭೀರ ಆರೋಪ ಮಾಡಿದರು. ನಗರದಲ್ಲಿ ಶುಕ್ರವಾರ ಆರೆಸ್ಸೆಸ್ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಯು ಜಾರಿ ನಿರ್ದೇಶನಾಲಯದವರಿಗೆ ಸಿಗದಂತೆ ಸರ್ಕಾರವೇ ವ್ಯವಸ್ಥೆ ಮಾಡಿದೆ. ನಾಪತ್ತೆಯಾಗಿರುವುದು ಸರ್ಕಾರದ ಗುಪ್ತಚರ ಇಲಾಖೆಗೆ ಗೊತ್ತಾಗಲಿಲ್ಲವೇ?, ಬ್ರಹ್ಮಾಂಡ ಹಗರಣದಲ್ಲಿ ಭಾಗಿಯಾದವನನ್ನು ಹಿಡಿಯುವ ಕೆಲಸ ನಿಮ್ಮದೋ ಅಥವಾ ಆರೆಸ್ಸೆಸ್ ಪಥಸಂಚಲನದಲ್ಲಿ ಪಾಲ್ಗೊಂಡವರನ್ನು
ಅಮಾನತು ಮಾಡುವುದು ನಿಮ್ಮ ಕೆಲಸವೋ? ಆರೆಸ್ಸೆಸ್ ಚಟುವಟಿಕೆಯಲ್ಲಿ ಭಾಗಿಯಾಗಲು ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದರು.ಕೆಪಿಎಸ್ಸಿ ಹಗರಣದಲ್ಲಿ ದಾಖಲಾತಿಗಳು ಕಣ್ಮರೆಯಾಗಿವೆ. ಅಧಿಕಾರಿ ನಾಪತ್ತೆಯಾಗಿದ್ದಾನೆ. ಆತನನ್ನು ಹಿಡಿಯುವುದು ಸರ್ಕಾರದ ಜವಾಬ್ದಾರಿ.ಆತ ನಾಪತ್ತೆಯಾಗುವವರೆಗೆ ಸರ್ಕಾರ ಏನು ಮಾಡುತ್ತಿತ್ತು? ಆತನನ್ನು ಇವರೇ ಬಚ್ಚಿಟ್ಟಿದ್ದಾರೆ. ತತ್ವ ಸಿದ್ಧಾಂತ, ತತ್ವಜ್ಞಾನದ ಬಗ್ಗೆ ಮಾತನಾಡುವ ಸಿಎಂ ಭಾಷಣಕ್ಕೆ ಕಿಮ್ಮತ್ತು ಬರಬೇಕಾದರೆ ಆತನನ್ನು ಮೊದಲು ಹಿಡಿದುಕೊಂಡು ಬನ್ನಿ ಎಂದು ಹೇಳಿದರು.
1970ರಿಂದಲೂ ಸಂಘದ ಚಟುವಟಿಕೆಯಲ್ಲಿ ಭಾಗಿಯಾದವರ ಮೇಲೆ ಹಾಕುವ ಕೇಸಗಳನ್ನು ಕೋರ್ಟ್ ತೆಗೆದು ಹಾಕಿದೆ. ಸರ್ಕಾರ ದ್ವೇಷ ಭಾವನೆಯಿಂದ ಈ ರೀತಿ ವರ್ತಿಸುತ್ತಿದೆ. ಕೋರ್ಟ್ನಲ್ಲಿ ಅದು ನಿಲ್ಲುವುದಿಲ್ಲ. ಆಗ ಇವರ ಮಾನ ಮರ್ಯಾದೆ ಹೋಗುತ್ತದೆ ಎಂದರು.
ಈರುಳ್ಳಿ ಬೆಲೆ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು. ದೇಶದ ಬಹುತೇಕ ಕಡೆ ಈರುಳ್ಳಿ ಇತ್ತು. ಆದರೆ ಹಲವೆಡೆ ಹೆಚ್ಚು ಮಳೆಯಾಗಿದ್ದರಿಂದ ಅದು ಕೊಳೆಯಿತು. ಕೆಲವೆಡೆ ಮಳೆ ಕೊರತೆಯಿಂದ ತೊಂದರೆಯಾಗಿದೆ. ಇದೀಗ ನಾವು 1.20ಲಕ್ಷ ಟನ್ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ. ಗ್ರಾಹಕರ ಹಿತ ಗಮನವಿಟ್ಟುಕೊಂಡು ಕ್ರಮ
ಕೈಗೊಳ್ಳಲಾಗುತ್ತಿದೆ. ದೇಶದ ಎಲ್ಲಾ ಕಡೆ ಒಂದೇ ರೀತಿ ಬೆಲೆ ಇಲ್ಲ. ಹೀಗಾಗಿ ಎಲ್ಲೆಲ್ಲೆ ಈರುಳ್ಳಿ ಬೆಲೆ ಹೆಚ್ಚಾಗಿದೆಯೋ ಅಲ್ಲಿ ಮೊದಲು ಕಳುಹಿಸುತ್ತಿದ್ದೇವೆ ಎಂದು ತಿಳಿಸಿದರು.ಧಾರವಾಡ ಜಿಲ್ಲೆಯಲ್ಲಿ ಮಳೆ ಕೊರತೆ ಇದೆ. ಆದರೆ, ರಾಜ್ಯ ಸರ್ಕಾರ ಒಂದು ತಾಲೂಕನ್ನೂ ಬರಪೀಡಿತ ಅಂತ ಘೋಷಣೆ ಮಾಡಿಲ್ಲ. ರಾಜ್ಯ ಸರ್ಕಾರ ಸರಿಯಾಗಿ ಅಧ್ಯಯನ ಮಾಡಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರದಲ್ಲಿ ಗೊಂದಲವಿದೆ. ಅನೇಕ ಶಾಸಕರು ಮಂತ್ರಿ ಮಂಡಲ ರಚನೆ ಬಗ್ಗೆ ಸಿಟ್ಟಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಅನೇಕರು ಸದನದಲ್ಲಿ ಪಾಲ್ಗೊಂಡಿಲ್ಲ. ಸರ್ಕಾರದಲ್ಲಿ ರಾಜಕೀಯ ಅಸ್ಥಿರತೆ ಆರಂಭವಾಗಿದೆ ಎಂದು ಸಚಿವ ಜೋಶಿ ಹೇಳಿದರು.
santhoshvani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್


0 ಕಾಮೆಂಟ್‌ಗಳು