ವ್ಯಸನ ಮುಕ್ತ ಯುವ ಜನತೆ ದೇಶದ ಅಭಿವೃದ್ಧಿಗೆ ಅತ್ಯಗತ್ಯ: ಪ್ರಧಾನಿ ನರೇಂದ್ರ ಮೋದಿ ಕರೆ

(Santhoshvani.com)

ನವದೆಹಲಿ:ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು 'ವಿಕಸಿತ ಭಾರತ' ದೇಶದ ಯುವಸಮುದಾಯ ಮಾದಕದ್ರವ್ಯ ಮುಕ್ತವಾಗಿರುವುದು ಅತ್ಯಗತ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್'ನ 137ನೇ ಆವೃತ್ತಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಯುವಜನತೆಯನ್ನು ಮಾದಕವಸ್ತುಗಳ ಜಾಲದಿಂದ ಮುಕ್ತಗೊಳಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಶಾ ಮುಕ್ತ ಯುವ ಅಭಿಯಾನ:ಸಂಘಟಿತವಾಗಿ ನಡೆಯುತ್ತಿರುವ 'ನಶಾ ಮುಕ್ತ ಯುವಿ ಫಾರ್ ವಿಕಸಿತ ಭಾರತ' ಅಭಿಯಾನಕ್ಕೆ ದೇಶಾದ್ಯಂತ ಉತ್ತಮ ಸ್ಪಂದನೆ ಸಿಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಭಾಗವಹಿಸುತ್ತಿದ್ದಾರೆ.

ಮಾದಕದ್ರವ್ಯ ಚಟವು ಕೇವಲ ಒಬ್ಬ ವ್ಯಕ್ತಿಯನ್ನಷ್ಟೇ ಅಲ್ಲದೆ ಇಡೀ ಕುಟುಂಬ ಮತ್ತು ಸಮಾಜವನ್ನೇ ನಾಶಪಡಿಸುತ್ತದೆ. ಈ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಲು ಪ್ರಭಾವಶಾಲಿ ಘೋಷಣೆಗಳು, ಹಾಡುಗಳು, ಬೀದಿ ನಾಟಕಗಳು ಹಾಗೂ ವಿವಿಧ ಭಾಷೆಗಳಲ್ಲಿ ಜಾಗೃತಿ ಮೂಡಿಸುವ ಸಾಮಾಜಿಕ ಜಾಲತಾಣ ವಿಷಯಗಳನ್ನು ರೂಪಿಸುವಂತೆ ಅವರು ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ಕಲಾವಿದರಿಗೆ ಕರೆ ನೀಡಿದ್ದಾರೆ.

ದೇಶಭಕ್ತಿಯ ಆಗಸ್ಟ್ ತಿಂಗಳು:ಆಗಸ್ಟ್ ತಿಂಗಳು ದೇಶಾದ್ಯಂತ ದೇಶಭಕ್ತಿಯ ಭಾವನೆಯನ್ನು ಉನ್ನತ ಮಟ್ಟಕ್ಕೇರಿಸುತ್ತದೆ ಎಂದು ಪ್ರಧಾನಿ ಹೇಳಿದರು. ರಾಷ್ಟ್ರೀಯ ಕೈಮಗ್ಗ ದಿನ, ಸ್ವಾತಂತ್ರ್ಯ ದಿನಾಚರಣೆ, ರಾಷ್ಟ್ರೀಯ ಬಾಹ್ಯಾಕಾಶ ದಿನ, ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣೆ ಮತ್ತು 'ಹರ್ ಘರ್ ತಿರಂಗಾ' ಅಭಿಯಾನಗಳು ಜನರ ಮನಸ್ಸಿನಲ್ಲಿ ದೇಶಪ್ರೇಮವನ್ನು ಹೆಚ್ಚಿಸಿವೆ ಎಂದರು.

'ವಂದೇ ಮಾತರಂ' ಗೀತೆಗೆ 150 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ವಿಶ್ವಮಟ್ಟದಲ್ಲಿ ನಡೆದ 'ಸೂರ್ಯಪಥ್ ತಿರಂಗಾ' ಪಯಣದ ಕುರಿತೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳಾ ಸಬಲೀಕರಣ ಮತ್ತು ಸ್ವಚ್ಛತೆ:'ಪಿಎಂ ಸ್ವನಿಧಿ ಯೋಜನೆಯಡಿ' ಸುಮಾರು 35 ಲಕ್ಷ ಮಹಿಳೆಯರು ಸಾಲ ಸೌಲಭ್ಯ ಪಡೆದು ತಮ್ಮ ಉದ್ಯಮಗಳನ್ನು ವಿಸ್ತರಿಸಿಕೊಂಡಿದ್ದಾರೆ.

ಮಹಿಳೆಯರ ವ್ಯಾಪಾರ ಬೆಳೆದಂತೆ ಇಡೀ ಕುಟುಂಬದ ಭವಿಷ್ಯವೂ ಪ್ರಗತಿ ಕಾಣುತ್ತದೆ ಎಂದರು. ಇದರೊಂದಿಗೆ ಉತ್ತರ ಪ್ರದೇಶದ 'ಪಟ್ಟಾಯಿ' ಗ್ರಾಮದ ಯುವಕರು ಕೆರೆಗಳನ್ನು ಸ್ವಚ್ಛಗೊಳಿಸಿದ ಉದಾಹರಣೆ ಹಾಗೂ ಅಮರನಾಥ ಯಾತ್ರೆಯ ಸಮಯದಲ್ಲಿ ಕುದುರೆ-ಖಚರಗಳ ಸಗಣಿಯಿಂದ ಬಯೋ ಗ್ಯಾಸ್ ತಯಾರಿಸಿ 'ಸ್ವಚ್ಛ ಜ್ಯೋತಿ' ಬೆಳಗಿಸಿದ ವಿಶಿಷ್ಟ ಪ್ರಯೋಗವನ್ನು ಅವರು ಶ್ಲಾಘಿಸಿದರು.

ಬರುತ್ತಿರುವ ಹಬ್ಬದ ಸಾಲಿನಲ್ಲಿ ಪ್ರತಿಯೊಬ್ಬರೂ ಭಾರತದಲ್ಲೇ ತಯಾರಾದ ಉತ್ಪನ್ನಗಳನ್ನು ಖರೀದಿಸುವ ಮೂಲಕ 'ವೋಕಲ್ ಫಾರ್ ಲೋಕಲ್' ಕರೆಗೆ ಬೆಂಬಲ ನೀಡಬೇಕು ಹಾಗೂ ದೇಶವನ್ನು ಆತ್ಮನಿರ್ಭರಗೊಳಿಸಲು ಶ್ರಮಿಸಬೇಕು ಎಂದು ಪ್ರಧಾನಿ ಮನವಿ ಮಾಡಿದರು. ಜೊತೆಗೆ, ಸೆಪ್ಟೆಂಬರ್ 3 ರಂದು ಜನ್ಮ ಶತಮಾನೋತ್ಸವ ಆಚರಿಸಿಕೊಳ್ಳಲಿರುವ ಖ್ಯಾತ ನಟ ದಿವಂಗತ ಉತ್ತಮ್ ಕುಮಾರ್ ಅವರಿಗೆ ಪ್ರಧಾನಿ ಈ ಸಂದರ್ಭದಲ್ಲಿ ಆದರಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು.







SANTHOSHVANI digital Daily News Network

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು