(Santhoshvani.com)
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಹಾಗೂ ರಂಗಭೂಮಿ ಕಲಾವಿದೆ ಲಲಿತಮ್ಮ ಅವರು ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.ಹಲವು ದಶಕಗಳ ಕಾಲ ಕಲಾ ಸೇವೆ ಸಲ್ಲಿಸಿದ್ದ ಹಿರಿಯ ಕಲಾವಿದೆ ಲಲಿತಮ್ಮ ಅವರನ್ನು ಕೊನೆಗಾಲದಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ, ಅವರು ಬೆಂಗಳೂರಿನ ‘ಅಮ್ಮನ ಮಡಿಲು ಟ್ರಸ್ಟ್’ ಆಶ್ರಮದಲ್ಲಿ ಆಶ್ರಯ ಪಡೆದು ಅಗತ್ಯ ಚಿಕಿತ್ಸೆ ಹಾಗೂ ಆರೈಕೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಲಲಿತಮ್ಮ ಅವರು ಸುಮಾರು ಮೂವತ್ತೈದು ವರ್ಷಗಳಿಗೂ ಅಧಿಕ ಕಾಲ ರಂಗಭೂಮಿಯಲ್ಲಿ ಸಕ್ರಿಯವಾಗಿ ಕಲಾ ಸೇವೆ ಸಲ್ಲಿಸಿದ್ದರು. ನೂರಾರು ನಾಟಕ ಹಾಗೂ ಪ್ರದರ್ಶನಗಳಲ್ಲಿ ಅಭಿನಯಿಸಿದ್ದ ಅವರು ಕಿರುತೆರೆ ಮತ್ತು ಸಿನಿಮಾರಂಗದಲ್ಲೂ ತಮ್ಮದೇ ಆದ ವಿಶೇಷ ಮುದ್ರೆ ಒತ್ತಿದ್ದರು. ರಂಗೋಲಿ ಮಾಂಗಲ್ಯ ಮಹಾಮಾಯಿ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ಹಾಗೂ ಸುಂಟರಗಾಳಿ ಜಾಕಿ ‘ವಜ್ರಕಾಯ ಜಂಗ್ಲಿ ಕಿತ್ತೂರು ಪುತ್ರ ಮುಂತಾದ ಪ್ರಸಿದ್ಧ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ವಿಶೇಷವಾಗಿ, ಖ್ಯಾತ ನಟ ದರ್ಶನ್ ಅಭಿನಯದ ‘ಸುಂಟರಗಾಳಿ’ ಸಿನಿಮಾದಲ್ಲಿ ಅವರು ನಿರ್ವಹಿಸಿದ್ದ ‘ಸಾರಾಯಿ ಶಾರದೆ’ ಪಾತ್ರವು ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಮದುವೆ ಹಾಗೂ ಮಕ್ಕಳಿಲ್ಲದೆ ಜೀವನದಲ್ಲಿ ಹಿರಿಯ ನಟಿ ಲಲಿತಮ್ಮ ಅವರು ಹಲವು ಏಳುಬೀಳುಗಳನ್ನು ಹಾಗೂ ಕಷ್ಟಗಳನ್ನು ಎದುರಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮತ್ತೊಬ್ಬ ಕಲಾವಿದೆ ಪಂಕಜಾ ಅವರು ಗುರುತಿಸಿ, ಬೆಂಗಳೂರಿನ ‘ಅಮ್ಮನ ಮಡಿಲು ಟ್ರಸ್ಟ್’ ಆಶ್ರಮಕ್ಕೆ ಕರೆತಂದು ನೆರವು ಕಲ್ಪಿಸಿದ್ದರು. ಹಿರಿಯ ನಟಿಯ ಅಗಲಿಕೆಗೆ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
Santhoshvani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್


0 ಕಾಮೆಂಟ್‌ಗಳು