(Santhoshvani.com)
ಬೆಂಗಳೂರು: ಬೈಕ್ ಸವಾರರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದಲ್ಲಿ ಇನ್ನು ಮುಂದೆ ಅರ್ಧ ಹೆಲ್ಮೆಟ್ (ಹಾಫ್ ಹೆಲ್ಮೆಟ್) ಬಳಸುವಂತಿಲ್ಲ ಎಂದು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಸುರಕ್ಷಿತವಲ್ಲದ ಅರ್ಧ ಹೆಲ್ಮೆಟ್ ಬಳಕೆಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ನಿಷೇಧಿಸಿದೆ.
ಅಸುರಕ್ಷಿತ ಅರ್ಧ ಹೆಲ್ಮೆಟ್ ಉತ್ಪಾದನೆ ಮತ್ತು ತಯಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ. ವಿಕಾಸಸೌಧದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಾರಿಗೆ ಸಚಿವ ಬೈರತಿ ಸುರೇಶ್ ನೇತೃತ್ವದಲ್ಲಿ ನಡೆದ ರಸ್ತೆ ಸುರಕ್ಷತೆ ಮತ್ತು ಟ್ರಾಫಿಕ್ ನಿಯಮಗಳ ಉಲ್ಲಂಘನೆ ವಿಚಾರ ಕುರಿತ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನು ಕೇವಲ ಸವಾರರ ಮೇಲೆ ಮಾತ್ರವಲ್ಲದೆ, ಅಂತಹ ಸುರಕ್ಷಿತವಲ್ಲದ ಹೆಲ್ಮೆಟ್‌ಗಳನ್ನು ಉತ್ಪಾದಿಸುವ ತಯಾರಿಕಾ ಕಂಪನಿಗಳ ಮೇಲೂ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಸಂಚಾರಿ ನಿಯಮದಡಿ ಅರ್ಧ ಹೆಲ್ಮೆಟ್ ಧರಿಸಿ ಸಂಚರಿಸುವ ಅವಕಾಶವಿಲ್ಲದಿದ್ದರೂ, ಮಾರುಕಟ್ಟೆಯಲ್ಲಿ ಅವುಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಬಹುತೇಕ ಸವಾರರು ಕೇವಲ ನಿಯಮಗಳಿಂದ ತಪ್ಪಿಸಿಕೊಳ್ಳಲು ಮಾತ್ರ ಈ ಹೆಲ್ಮೆಟ್‌ಗಳನ್ನು ಬಳಕೆ ಮಾಡುತ್ತಿದ್ದರು.
ಇದು ನೇರವಾಗಿ ನಿಯಮ ಉಲ್ಲಂಘನೆ ಎಂಬುದು ತಿಳಿದಿದ್ದರೂ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿತ್ತು. ಇದೇ ಕಾರಣಕ್ಕೆ ತಯಾರಿಕಾ ಕಂಪನಿಗಳ ವಿರುದ್ಧವೂ ಕಾನೂನು ವ್ಯಾಪ್ತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.
Santhoshvani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್


0 ಕಾಮೆಂಟ್‌ಗಳು