ಮನೆಯಲ್ಲೇ ಕುಳಿತು ಮೊಬೈಲ್ ಮೂಲಕವೇ ಮುಗಿಸಿ ರೇಷನ್ ಕಾರ್ಡ್ ಇ-ಕೆವೈಸಿ: ಸಚಿವರಿಂದ ಹೊಸ ತಂತ್ರಜ್ಞಾನಕ್ಕೆ ಚಾಲನೆ!


(Santhoshvani.com)

ಬೆಂಗಳೂರು: ರಾಜ್ಯದ ರೇಷನ್ ಕಾರ್ಡ್ ಬಳಕೆದಾರರಿಗೆ ಆಹಾರ ಇಲಾಖೆಯು ಮಹತ್ವದ ಉಪಕ್ರಮವೊಂದನ್ನು ಪರಿಚಯಿಸಿದ್ದು, ಇನ್ನು ಮುಂದೆ ಇ-ಕೆವೈಸಿ ಪ್ರಕ್ರಿಯೆಗಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾಯುವ ತಾಪತ್ರಯ ತಪ್ಪಿದೆ. ಸಾರ್ವಜನಿಕರ ಈ ಕಷ್ಟವನ್ನು ದೂರ ಮಾಡಲು ಕರ್ನಾಟಕ ಆಹಾರ ಇಲಾಖೆಯು 'ಅನ್ನ ಸೇವೆ' ಎಂಬ ನೂತನ ಮೊಬೈಲ್ ಅಪ್ಲಿಕೇಶನ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಅಷಾದ್ ಅವರು ಈ ಹೊಸ ತಾಂತ್ರಿಕ ಆಪ್‌ಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

​ಮೊಬೈಲ್‌ನಲ್ಲೇ ಸುಲಭವಾಗಿ ಇ-ಕೆವೈಸಿ ಪೂರ್ಣಗೊಳಿಸಿ:

ಸ್ಮಾರ್ಟ್‌ಫೋನ್ ಹೊಂದಿರುವ ಸಾರ್ವಜನಿಕರು ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳು ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಅಲೆಯುವ ಅಗತ್ಯವಿಲ್ಲ. ತಮ್ಮ ಸ್ವಂತ ಮೊಬೈಲ್ ಮೂಲಕವೇ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಪ್ರಕ್ರಿಯೆಯನ್ನು ಅತ್ಯಂತ ಸುಲಭವಾಗಿ ಮುಗಿಸಬಹುದು.

​ವಿಶೇಷವಾಗಿ ಬೆರಳಚ್ಚು ಮೂಡದ ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಅನುಕೂಲವಾಗಲೆಂದು ಈ ಆಪ್‌ನಲ್ಲಿ ಫೇಸ್ ಆಥೆಂಟಿಕೇಶನ್ ತಂತ್ರಜ್ಞಾನದ ಮೂಲಕ ಮುಖದ ಗುರುತು ಬಳಸಿ ಇ-ಕೆವೈಸಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

​ಮೊದಲ ಹಂತದಲ್ಲಿ ಆಯ್ದ ಜಿಲ್ಲೆಗಳಲ್ಲಿ ಮಾತ್ರ ಜಾರಿ:

ಸದ್ಯದ ಪ್ರಾಯೋಗಿಕ ಹಂತದಲ್ಲಿ ಈ ಹೊಸ ಸೇವೆಯನ್ನು ರಾಜ್ಯದ ಎಂಟು ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ. ಈ ಜಿಲ್ಲೆಗಳ ಸುಮಾರು ನಾಲ್ಕುವರೆ ಕೋಟಿ ಫಲಾನುಭವಿಗಳು ಇದರ ನೇರ ಲಾಭ ಪಡೆಯಬಹುದು ಎಂದು ತಿಳಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದ ಬಳಿಕ ರಾಜ್ಯದ ಉಳಿದೆಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.










Santhoshvani digital Daily News Network

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 



0 ಕಾಮೆಂಟ್‌ಗಳು