ರೈತರ ಜೊತೆ ಚೆಲ್ಲಾಟ ಆಡ್ತಾ ಇದ್ದೀರಾ ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಸಮರ ಸಾರಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ!

(Santhoshvani.com)

ಬೆಂಗಳೂರು: ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡ ತೋಟದ ಗುಡ್ಡಹಳ್ಳಿ, ಅಂಚೆಪಾಳ್ಯ, ತಿರುಮಲಪುರ, ಕೆಜಿ ಶ್ರೀಕಂಠಪುರ, ಗಂಗನಹಳ್ಳಿ, ಕಾಚೋಹಳ್ಳಿ, ಹೊಸಹಳ್ಳಿ ಹಾಗೂ ಗೊಲ್ಲರಹಟ್ಟಿ ಸಂತ್ರಸ್ತರಿಂದ ಅಹವಾಲು ಸ್ವೀಕರಿಸಿದ ಬಳಿಕ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

​ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಲೆ ನನಗೆ ಯಾವುದೇ ರೀತಿಯ ಅಸೂಯೆ ಇಲ್ಲ, ಇನ್ನು ಹತ್ತು ವರ್ಷ ಅವರೇ ಮುಖ್ಯಮಂತ್ರಿಯಾಗಿರಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ರೈತರ ಜೊತೆ ಯಾಕೆ ಇಷ್ಟು ಚೆಲ್ಲಾಟವಾಡುತ್ತಿದ್ದೀರಾ ಎಂದು ಅವರು ಪ್ರಶ್ನಿಸಿದರು. "ಎಲ್ಲಿಂದ ಬಂದರು ಅಂತಾರೆ, ನಾವೇನು ಪಾಕಿಸ್ತಾನದಿಂದ ಬಂದಿದ್ದೀವಾ? ನಾವೂ ಕರ್ನಾಟಕದವರೇ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯಕ್ಕೆ ಬರುವ ಮುಂಚೆಯೇ ತಾನು ಬಿಡದಿಯಲ್ಲಿ ನಲವತ್ನಾಲ್ಕು ಎಕರೆ ಜಮೀನು ಖರೀದಿ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ ಕುಮಾರಸ್ವಾಮಿ, ತಾನು ಅಥವಾ ತಮ್ಮ ಸಹೋದರರು ಹಾಗೂ ಕುಟುಂಬದವರು ಕಾನೂನುಬಾಹಿರವಾಗಿ ಒಂದು ಇಂಚು ಭೂಮಿಯನ್ನು ಪಡೆದಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಸವಾಲು ಹಾಕಿದರು. ಇವರ ರೀತಿಯಲ್ಲಿ ಬೆದರಿಸಿ ಕಾನೂನುಬಾಹಿರವಾಗಿ ಜಮೀನು ಖರೀದಿ ಮಾಡಿರುವುದನ್ನು ಸಾಬೀತುಪಡಿಸಿದರೆ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ ಎಂದು ಗುಡುಗಿದರು. ನಾವು ಸ್ವಾಭಿಮಾನದಲ್ಲಿ ಬದುಕಿದ್ದೇವೆ ಎಂದು ತಿಳಿಸಿದ ಅವರು, ಈ ಪ್ರಾಜೆಕ್ಟ್ ಹೆಸರಿನಲ್ಲಿ ಮುಖ್ಯಮಂತ್ರಿಗಳು ಎಷ್ಟು ಎಕರೆ ಜಮೀನು ಲೂಟಿ ಮಾಡಿದ್ದಾರೆ ಎಂಬುದು ನಮಗೆ ತಿಳಿದಿದೆ ಎಂದರು.

ತಮ್ಮ ಮೇಲೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ಮುಖ್ಯಮಂತ್ರಿಯವರ ಆರೋಪಕ್ಕೆ ತಿರುಗೇಟು ನೀಡಿದ ಅವರು, ತಾವು ಬ್ಲ್ಯಾಕ್ ಮೇಲ್ ಮಾಡಿದ್ದರೆ ಇದುವರೆಗೆ ಯಾಕೆ ತಮ್ಮ ಮೇಲೆ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು. ನೈಸ್ ಯೋಜನೆಯಲ್ಲಿ ಏನೇನು ಅಕ್ರಮ ನಡೆದಿದೆ ಎಂಬ ಸಂಪೂರ್ಣ ದಾಖಲಾತಿಗಳು ತಮ್ಮ ಬಳಿ ಇವೆ ಎಂದರು. ಪಶ್ಚಿಮ ಬಂಗಾಳದ ರೀತಿಯಲ್ಲಿ ನಿಮ್ಮ ಕಬ್ಜಾದ ಭೂಮಿ ವಾಪಸ್ ಬರಬೇಕು ಎಂದು ಆಗ್ರಹಿಸಿದ ಅವರು, ತಮ್ಮ ಮೇಲೆ ಯಾವ ತನಿಖೆ ಬೇಕಾದರೂ ನಡೆಸಿಕೊಳ್ಳಲಿ ಎಂದು ಸವಾಲು ಹಾಕಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಧಾನಿಯಾದ ಕಾಲದಿಂದ ಇಲ್ಲಿಯವರೆಗೆ ತಮ್ಮ ಆಸ್ತಿ ಮತ್ತು ಕುಟುಂಬದ ಕುರಿತು ಯಾವುದೇ ಸಮಗ್ರ ತನಿಖೆ ನಡೆಸುವಂತೆ ಅವರು ಮುಕ್ತ ಸವಾಲು ಎಸೆದಿದ್ದಾರೆ.










Santhoshvani digital Daily News Network

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು