ಸಂಕೇಶ್ವರದ ಪ್ರಸಿದ್ಧ ನೀಲಗಾರ ಗಣಪತಿ ದರ್ಶನಕ್ಕೆ ಮುಗಿಬಿದ್ದ ಜನ: ನೂಕಾಟ-ತಳ್ಳಾಟದಿಂದ ತಪ್ಪಿದ ಭಾರಿ ಅನಾಹುತ!

(Santhoshvani.com)

ಹುಕ್ಕೇರಿ: ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಪ್ರಸಿದ್ಧ 'ನೀಲಗಾರ ಗಣಪತಿ'ಯ ದರ್ಶನ ಪಡೆಯಲು ಭಾನುವಾರ ಮುಗಿಬಿದ್ದ ಅಪಾರ ಜನಸಂದಣಿಯಿಂದಾಗಿ ಸಣ್ಣ ಪ್ರಮಾಣದ ಕಾಲ್ತುಳಿತ ಹಾಗೂ ತಳ್ಳಾಟದ ವಾತಾವರಣ ಉಂಟಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೆ ಭಾರಿ ಅನಾಹುತ ತಪ್ಪಿದೆ.  

​ಖಾಸಗಿ ಮನೆಯಲ್ಲಿ 21 ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆ:

ಇದು ಸಾರ್ವಜನಿಕ ಗಣೇಶ ದೇವಸ್ಥಾನವಲ್ಲ, ಬದಲಿಗೆ ಖಾಸಗಿ ಮನೆಯೊಂದರಲ್ಲಿ ಪ್ರತಿವರ್ಷ ಗಣೇಶ ಚತುರ್ಥಿಯಿಂದ 21 ದಿನಗಳ ಕಾಲ ವಿಶಿಷ್ಟವಾಗಿ ಪ್ರತಿಷ್ಠಾಪಿಸಿ ಪೂಜಿಸಲಾಗುವ ಗಣಪತಿಯಾಗಿದೆ. ಕಳೆದ ವರ್ಷ ಕುಟುಂಬದಲ್ಲಿ ಅಹಿತಕರ ಘಟನೆ ನಡೆದಿದ್ದರಿಂದ ಗಣೇಶನನ್ನು ಪ್ರತಿಷ್ಠಾಪಿಸಿರಲಿಲ್ಲ. ಪರಿಣಾಮವಾಗಿ ಈ ಬಾರಿ ಭಕ್ತರ ಉತ್ಸಾಹ ಇಮ್ಮಡಿಸಿದ್ದು, ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ವಿವಿಧಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹರಿದುಬಂದಿದ್ದಾರೆ. ಹಬ್ಬದ 14ನೇ ದಿನ ಹಾಗೂ ಭಾನುವಾರ ರಜೆ ಇದ್ದ ಹಿನ್ನೆಲೆಯಲ್ಲಿ ಸುಮಾರು 3 ರಿಂದ 4 ಕಿಲೋಮೀಟರ್ ದೂರದವರೆಗೆ ಸರತಿ ಸಾಲಿನಲ್ಲಿ ಭಕ್ತರು ನಿಂತಿದ್ದರು.

​ದರ್ಶನ ಪಡೆವ ವೇಳೆ ನೂಕಾಟ, ಹರಸಾಹಸ ಪಟ್ಟ ಪೊಲೀಸರು:

ಮೂರ್ತಿಯ ಸಮೀಪ ತೆರಳಿ ದರ್ಶನ ಪಡೆಯಲು ಮುಗಿಬಿದ್ದ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗಿ ನೂಕಾಟ-ತಳ್ಳಾಟ ಉಂಟಾಗಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಕೆಲವರು ಕೆಳಗೆಬಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಬಿಗಡಾಯಿಸಿದ ಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಡಬೇಕಾಯಿತು. ತಕ್ಷಣವೇ ಎಚ್ಚೆತ್ತ ಪೊಲೀಸ್ ಸಿಬ್ಬಂದಿ ಜನರನ್ನು ಚದುರಿಸಿ ದೊಡ್ಡ ಮಟ್ಟದ ಅನಾಹುತವನ್ನು ತಪ್ಪಿಸಿದ್ದಾರೆ. ಸದ್ಯ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದ್ದು, ಇನ್ನು 7-8 ದಿನಗಳ ಕಾಲ ಗಣೇಶನ ದರ್ಶನವಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ.  









Santhoshvani digital Daily News Network

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 



0 ಕಾಮೆಂಟ್‌ಗಳು