ನಟ ದರ್ಶನ್‌ಗೆ ಬಿಗ್ ಶಾಕ್ ನೀಡಿದ ಕೋರ್ಟ್ .ಪವಿತ್ರಾ ಗೌಡ ಜಾಮೀನು ಅರ್ಜಿ ಕೂಡ ವಜಾ!

(Santhoshvani.com)

ಬೆಂಗಳೂರು: ಬಹುಚರ್ಚಿತ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯೊಂದರಲ್ಲಿ, ಆರೋಪಿ ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಒಂದು ವಾರ ಮುಂದೂಡುವಂತೆ ಕೋರಿ ನಟ ದರ್ಶನ್ ಪರವಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಅಧಿಕೃತವಾಗಿ ತಿರಸ್ಕರಿಸಿದೆ. ಇದರೊಂದಿಗೆ ನಿಗದಿತ ವೇಳಾಪಟ್ಟಿಯಂತೆ ಸೆಪ್ಟೆಂಬರ್ 28ರ ಸೋಮವಾರದಂದು ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿje ಮುಂದುವರಿಯಲಿದೆ. ಇತ್ತೀಚೆಗೆ ಹೈಕೋರ್ಟ್ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಬೇಕಿದೆ ಎಂದು ದರ್ಶನ್ ಪರ ಹಿರಿಯ ವಕೀಲ ಹಶ್ಮತ್ ಪಾಷಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಹೈಕೋರ್ಟ್ ಆದೇಶದ ಪ್ರಮಾಣೀಕೃತ ಪ್ರತಿ ತಡವಾಗಿ ಲಭ್ಯವಾಗಿದ್ದು, ಸುಪ್ರೀಂಕೋರ್ಟ್‌ನಲ್ಲಿ ಅಮೆಲ್ಮನವಿ ದಾಖಲಿಸಲು ಕನಿಷ್ಠ 10 ದಿನಗಳ ಕಾಲಾವಕಾಶ ಅಗತ್ಯವಿದೆ ಎಂದು ಅವರು ವಾದ ಮಂಡಿಸಿದ್ದರು.  

ದರ್ಶನ್ ಪರ ವಕೀಲರ ವಾದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್ ಪರ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಸಚಿನ್, ಹೈಕೋರ್ಟ್ ತೀರ್ಪು ಪ್ರಕಟವಾದ ದಿನವೇ ಆದೇಶದ ಪ್ರತಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇನ್ನುಳಿದ ಸಾಕ್ಷಿಗಳ ವಿಚಾರಣೆ ಮುಂದುವರಿಸಿ, ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆಯಾಗುವವರೆಗೆ ಪ್ರದೋಷ್ ಹೇಳಿಕೆ ವಿಚಾರಣೆಯನ್ನು ಮಾತ್ರ ಬಾಕಿ ಇರಿಸಬೇಕೆಂಬ ರಕ್ಷಣಾ ತಂಡದ ಮನವಿಯನ್ನು ಪ್ರಾಸಿಕ್ಯೂಷನ್ ಬಲವಾಗಿ ವಿರೋಧಿಸಿತು. ಹೈಕೋರ್ಟ್‌ನಲ್ಲಿ ನಡೆದ ದೀರ್ಘ ಕಾನೂನು ಹೋರಾಟದ ಬಳಿಕ ಸೆಪ್ಟೆಂಬರ್ 24ರಂದೇ ಪ್ರದೋಷ್ ಅವರಿಗೆ ಅಧಿಕೃತ ಸಮನ್ಸ್ ಜಾರಿಗೊಳಿಸಲಾಗಿದೆ ಹಾಗೂ ಅರ್ಜಿಯಲ್ಲಿ ಯಾವುದೇ ಹೊಸ ಕಾನೂನು ಆಧಾರಗಳಿಲ್ಲ ಎಂದು ವಾದ ಮಂಡಿಸಿತು. ಪ್ರಾಸಿಕ್ಯೂಷನ್ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ದರ್ಶನ್ ಅರ್ಜಿಯನ್ನು ವಜಾಗೊಳಿಸಿದೆ. ಇದರ ಜೊತೆಗೆ, ಇದೇ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರಮುಖ ಆರೋಪಿ (ಎ-1) ಪವಿತ್ರಾ ಗೌಡ ಅವರು ತಮ್ಮ ಅನಾರೋಗ್ಯದ ಸಮಸ್ಯೆಗಳನ್ನು ಉಲ್ಲೇಖಿಸಿ ಸಲ್ಲಿಸಿದ್ದ ನಿಯಮಿತ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿ ಆದೇಶಿಸಿದೆ.  










Santhoshvani digital Daily News Network

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು