ಹುಕ್ಕೇರಿ ತಾಲೂಕನ್ನು ಬರಪೀಡಿತವೆಂದು ಘೋಷಿಸಿ: ಕೃಷಿ ಬಿಕ್ಕಟ್ಟು ವಿವರಿಸಿ ಸರ್ಕಾರಕ್ಕೆ ಶಾಸಕ ನಿಖಿಲ್ ಕತ್ತಿ ಮನವಿ.!


(Santhoshvani.com)

ಬೆಳಗಾವಿ:ಜಿಲ್ಲೆಯ ಹುಕ್ಕೇರಿ ವಿಧಾನ ಸಭೆ ಕ್ಷೇತ್ರದ ಶಾಸಕರಾದ ನಿಖಿಲ್ ಉಮೇಶ್ ಕತ್ತಿ ಅವರು ತಮ್ಮ ಕ್ಷೇತ್ರದ ಮಳೆಯಾಶ್ರಿತ ಪ್ರದೇಶಗಳಲ್ಲಿ ಉಂಟಾಗಿರುವ ತೀವ್ರ ಮಳೆಯಾಭಾವ ಹಾಗೂ ಬೆಳೆ ಹಾನಿಯ ಗಂಭೀರ ಪರಿಸ್ಥಿತಿಯನ್ನು ವಿವರಿಸಿ, ಹುಕ್ಕೇರಿ ತಾಲೂಕನ್ನು 'ಬರಪೀಡಿತ ತಾಲೂಕು' ಎಂದು ಅಧಿಕೃತವಾಗಿ ಘೋಷಿಸುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಶಾಸಕರ ಅಧಿಕೃತ ಪತ್ರದ ಪ್ರಕಾರ, ಮಳೆಯಾಶ್ರಿತ ಪ್ರದೇಶದಲ್ಲಿ ಈ ಇಳುವರಿ ಕಡಿತವು ಶೇ.50ಕ್ಕಿಂತ ಅಧಿಕವಾಗಿದೆ. ತಾಲೂಕಿನ ಪಶ್ಚಿಮ ಭಾಗದಲ್ಲಿ ಕಡಿಮೆ ಫಲವತ್ತತೆ ಹೊಂದಿರುವ ಭೂಮಿಯಲ್ಲಿ ಸಂಪೂರ್ಣ ಮಳೆಯಾಶ್ರಿತದಲ್ಲಿ ಬೆಳೆಯುವ ಹತ್ತಿ ಬೆಳೆಯಲ್ಲೂ ಸಹ ಹೂವುಬಿಡುವ ಹಾಗೂ ಕಾಯಿ ಕಟ್ಟುವ ಹಂತದಲ್ಲಿ ತೇವಾಂಶ ಕೊರತೆಯಿಂದಾಗಿ ಇಳುವರಿಯಲ್ಲಿ ಗಣನೀಯ ಕುಸಿತ ಉಂಟಾಗುವ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಜೋಳ ಹೊರತುಪಡಿಸಿ ಉಳಿದ ಯಾವುದೇ ಬೆಳೆಗಳಲ್ಲಿ ಕನಿಷ್ಠ ಇಳುವರಿ ಕೂಡ ಬರುವ ಸಾಧ್ಯತೆಗಳು ಬಹಳ ವಿರಳವಾಗಿವೆ.  

​ಬರ ನಿರ್ಣಯದ ವೈಜ್ಞಾನಿಕ ಮಾನದಂಡಗಳ ವಿಶ್ಲೇಷಣೆ:

ಬರ ಪರಿಸ್ಥಿತಿ ಘೋಷಣೆಗೆ ಸಾಮಾನ್ಯವಾಗಿ ವೈಜ್ಞಾನಿಕವಾಗಿ ಗಣನೆಗೆ ತೆಗೆದುಕೊಳ್ಳುವ ಪ್ರಮುಖ ಅಂಶಗಳಾದ ಬಿತ್ತನೆಯ ಕ್ಷೇತ್ರ (ಹುಕ್ಕೇರಿಯಲ್ಲಿ ಶೇ.75ಕ್ಕಿಂತ ಅಧಿಕ ಬಿತ್ತನೆ ಆಗಿದೆ), NDVI (Normalized Difference Vegetation Index - ಹುಕ್ಕೇರಿಯಲ್ಲಿ ಶೇ.60ಕ್ಕಿಂತ ಅಧಿಕ ಎಲ್ಲ ಬೆಳೆಗಳು ಸಂಪೂರ್ಣ ಒಣಗಿರುವುದಿಲ್ಲ), ತೇವಾಂಶ ಕೊರತೆ (ಹುಕ್ಕೇರಿಯಲ್ಲಿ ಈ ಪ್ರಮಾಣದಲ್ಲಿ ಸದ್ಯಕ್ಕೆ ಇಲ್ಲ) ಹಾಗೂ ಜಲಶಾಯಗಳ ಮಟ್ಟದ ಮಾನದಂಡಗಳು ಸದ್ಯಕ್ಕೆ ತಾಲೂಕಿನ ಪರವಾಗಿಲ್ಲದಿದ್ದರೂ ಸಹ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಉಂಟಾದ ತೀವ್ರ ಮಳೆ ಅಭಾವದ ಹಿನ್ನೆಲೆಯಲ್ಲಿ ತಾಲೂಕಿನ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಮುಂದುವರೆದು, ಮಳೆಯಾಭಾವದ ಕಾರಣ ಮುಂಗಾರು ಹಂಗಾಮಿನ ತಯಾರಿಗೂ ಕೂಡ ದೊಡ್ಡ ಮಟ್ಟದಲ್ಲಿ ತೊಂದರೆ ಉಂಟಾಗಿದೆ. ಈ ಎಲ್ಲ ಪ್ರಮುಖ ವಾಸ್ತವಾಂಶಗಳನ್ನು ಗಂಭೀರವಾಗಿ ಪರಿಗಣಿಸಿ, ಹುಕ್ಕೇರಿ ತಾಲೂಕನ್ನು ಬರಪೀಡಿತ ತಾಲೂಕುಗಳ ಗುಂಪಿಗೆ ಸೇರಿಸಿ, ತಕ್ಷಣವೇ 'ಬರಪೀಡಿತ ತಾಲೂಕು' ಎಂದು ಘೋಷಿಸಿ ಸೂಕ್ತ ಬರ ಪರಿಹಾರವನ್ನು ಮಂಜೂರು ಮಾಡುವಂತೆ ಶಾಸಕ ನಿಖಿಲ್ ಉಮೇಶ್ ಕತ್ತಿ ಅವರು ತಮ್ಮ ಮನವಿಯಲ್ಲಿ ಬಲವಾಗಿ ಆಗ್ರಹಿಸಿದ್ದಾರೆ.










Santhoshvani digital Daily News Network

ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್ 

0 ಕಾಮೆಂಟ್‌ಗಳು