(santhoshvani.com)
ಬೆಂಗಳೂರು: ನೈಸ್ ಯೋಜನೆಯು ದೇಶದ ಸಾರ್ವಕಾಲಿಕ 2ಜಿ ಸ್ಪೆಕ್ಟ್ರಮ್ ಹಾಗೂ ಕಲ್ಲಿದ್ದಲು ಹಗರಣಗಳಿಗಿಂತಲೂ ಅತ್ಯಂತ ದೊಡ್ಡದು ಎಂದು ಕೇಂದ್ರ ಕೈಗಾರಿಕಾ ಸಚಿವರು ಹಾಗೂ ಜೆಡಿಎಸ್ ರಾಜ್ಯಾದ್ಯಕ್ಷರಾದ ಎಚ್.ಡಿ. ಕುಮಾರಸ್ವಾಮಿ ಇಂದು ನೇರ ಆರೋಪ ಮಾಡಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದೀರ್ಘ ಸುದ್ದಿಗೋಷ್ಠಿಯಲ್ಲಿ ಅವರು ದಾಖಲೆಗಳನ್ನು ಒಂದೊಂದಾಗಿ ಬಿಚ್ಚಿಟ್ಟು ಎಚ್‌ಡಿಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನೈಸ್ ಯೋಜನೆಯ ಮೂಲವೇ ಬೇರೆ ಇದ್ದು, ಒಪ್ಪಂದವಾಗಿರುವುದೇ ಒಂದು ಎಂದು ಅವರು ವಿವರಿಸಿದರು. ನೈಸ್ ಯೋಜನೆಗೂ ಅಂದು ಸಹಿ ಹಾಕಿರುವ ಎಚ್.ಡಿ. ದೇವೇಗೌಡರಿಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ದಾಖಲೆ ಸಮೇತ ಅವರು ಬಿಡುಗಡೆ ಮಾಡಿದರು. ಬೇಕಿದ್ದರೆ ರಾಜ್ಯ ಸರ್ಕಾರ ವಿಧಾನಸೌಧದ ಮೆಟ್ಟಿಲು ಮೇಲೆ ಇದರ ಬಗ್ಗೆ ಚರ್ಚೆ ಮಾಡಲಿ, ಅದಕ್ಕೆ ತಾನು ಸಂಪೂರ್ಣ ಸಿದ್ಧನಿದ್ದೇನೆ ಎಂದು ಕುಮಾರಸ್ವಾಮಿ ಅವರು ನೇರವಾಗಿ ಸಿಎಂಗೆ ಪಂಥಾಹ್ವಾನ ನೀಡಿದರು.
ನೈಸ್ ಯೋಜನೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಕೂಸು ಎಂದು ಕೆಲವರು ಹೇಳುತ್ತಿದ್ದು, ಈ ಬಗ್ಗೆ ನೇರ ಚರ್ಚೆಗೆ ತಾನು ಸಿದ್ಧ ಎಂದು ಸವಾಲು ಹಾಕಿದ್ದಾರೆ. ಈಗಾಗಲೇ ನ್ಯಾಯಾಲಯವು ನೈಸ್ ಯೋಜನೆ ಕುರಿತಂತೆ ಹಲವಾರು ಲೋಪಗಳನ್ನು ಗಮನಿಸಿದೆ. ಕಳೆದ 1995ರಲ್ಲಿ ನೈಸ್ ಯೋಜನೆ ಕುರಿತಾದ ಎಲ್ಲಾ ವಿವರಗಳನ್ನು ಕುಮಾರಸ್ವಾಮಿ ಅವರು ಇಂದಿನ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದರು.
ಮೂಲದಲ್ಲಿ ನೈಸ್ ಕಂಪನಿ ಇರಲಿಲ್ಲ, ವಿಎಚ್‌ಬಿ, ಕಲ್ಯಾಣ್ ಗ್ರೂಪ್ ಆಫ್ ಕಂಪನಿ, ಸ್ಕಾಬ್ ಇಂಜಿನಿಯರಿಂಗ್ ಕಂಪನಿ ಜೊತೆ ದೇವೇಗೌಡರು ಸಹಿ ಹಾಕಿದ್ದರು. ಫೆಬ್ರವರಿ 20, 1995ರಲ್ಲಿ ಈ ಒಪ್ಪಂದವಾಗಿದ್ದು, ಅದೇ ವರ್ಷದ ಮೇ ತಿಂಗಳಲ್ಲೇ ಈ ಕಂಪನಿಯು ಹಲವಾರು ಪತ್ರ ವ್ಯವಹಾರ ಮಾಡಿತು. ನಂತರ ಭೂಮಿ ಸ್ವಾಧೀನ ಕುರಿತಂತೆ ಡಿಪಿಆರ್ ಹಾಗೂ ಲಾಭ-ನಷ್ಟದ ಬಗ್ಗೆಯೂ ಚರ್ಚೆ ನಡೆದಿತ್ತು. ನವೆಂಬರ್ 8, 1995ರಲ್ಲಿ ಸಂಪುಟ ಒಪ್ಪಿಗೆ ನೀಡಿದ್ದು, 30 ವರ್ಷ ಟೋಲ್ ಸಂಗ್ರಹಕ್ಕೆ ಅವಕಾಶ ನೀಡಲಾಗಿತ್ತು. ಭೂಮಿ ಸ್ವಾಧೀನ ವೆಚ್ಚವನ್ನು ಅವರೇ ಭರಿಸಬೇಕು ಎಂಬ ನಿಯಮಾನುಸಾರ ಅನುಮತಿ ನೀಡಲಾಗಿತ್ತು. ನಂತರ ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಯೋಜನೆಗೆ ಭಾರತ್ ಪವರ್ ಲಿಮಿಟೆಡ್‌ಗೆ 1997ರಲ್ಲಿ ಮಂಜೂರಾತಿ ನೀಡಿದ್ದರು. ಆಗ ಕೂಡ ನೈಸ್ ಕಂಪನಿ ಇರಲಿಲ್ಲ.
ಏಪ್ರಿಲ್ 3, 1997ರಲ್ಲಿ ಈ ಬಗ್ಗೆ ಅಗ್ರಿಮೆಂಟ್ ಕೂಡ ಆಯಿತು. ಆಗ ಡಿಪಿಆರ್‌ನಲ್ಲಿ ಫಲವತ್ತಾದ ಯಾವುದೇ ಭೂಮಿಯನ್ನು ಕೂಡ ಗುರುತಿಸಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಯೋಜನೆಗಾಗಿ ಉತ್ತಮ ಕೃಷಿ ಭೂಮಿಯನ್ನು ಗುರುತಿಸದೆ, ಬಂಜರು ಭೂಮಿಯನ್ನು ಬಳಸಬೇಕು ಎಂಬ ನಿಯಮವಿತ್ತು. ರಸ್ತೆ ಕಾಮಗಾರಿಗೆ 6,999 ಎಕರೆ ಭೂಮಿಗೆ ಬದ್ಧತೆ ಮಾಡಲಾಗಿತ್ತು. ಫ್ರೇಮ್‌ವರ್ಕ್ ಒಪ್ಪಂದ ಮಾಡಿಕೊಂಡು ಯಾವುದೇ ನಿಯಮ ಉಲ್ಲಂಘಿಸಬಾರದು ಹಾಗೂ ಕೆರೆಗಳನ್ನು ಮುಟ್ಟಬಾರದು ಎಂಬ ಕಠಿಣ ಶರತ್ತುಗಳಿದ್ದವು ಎಂದು ಅವರು ವಿವರಿಸಿದರು.
Santhoshvani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್

0 ಕಾಮೆಂಟ್‌ಗಳು