(Santhoshvani.com)
ನೋಯ್ಡಾ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ರಾತ್ರಿ ಸಂಚರಿಸುತ್ತಿದ್ದ ಡಬಲ್ ಡೆಕ್ಕರ್ ಸ್ಲೀಪರ್ ಬಸ್‌ಗೆ ಅನಿರೀಕ್ಷಿತವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಮಹಿಳೆ ಸೇರಿದಂತೆ ಒಟ್ಟು 9 ಜನ ಪ್ರಯಾಣಿಕರು ಸಜೀವ ದಹನಗೊಂಡಿರುವ ದಾರುಣ ಘಟನೆ ನಡೆದಿದೆ. ದೆಹಲಿಯಿಂದ ಮಹೋಬಾಗೆ ತೆರಳುತ್ತಿದ್ದ ಈ ಬಸ್‌ನಲ್ಲಿ ಸುಮಾರು 30ರಿಂದ 35 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ರಾತ್ರಿ ಸುಮಾರು 11:30ರ ವೇಳೆಗೆ ಬಸ್ ಎಕ್ಸ್‌ಪ್ರೆಸ್‌ವೇನಲ್ಲಿ ಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ದಟ್ಟವಾದ ಹೊಗೆ ಆವರಿಸುತ್ತಿದ್ದಂತೆ, ಪ್ರಾಣಭಯದಿಂದ ಕೆಲವರು ಬಸ್‌ನ ಕಿಟಕಿ ಗಾಜುಗಳನ್ನು ಒಡೆದು ಮತ್ತು ಬಸ್‌ನಿಂದ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹರಸಾಹಸಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ದುರಂತ ಸಂಭವಿಸಿರಬಹುದು ಎಂದು ಎಡಿಎಂ ಅಜಿತ್ ಸಿಂಗ್ ತಿಳಿಸಿದ್ದಾರೆ. ಈ ಭೀಕರ ಬಸ್ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಬಸ್‌ನಲ್ಲಿ ಪ್ರಯಾಣಿಸಿ ಪ್ರಾಣ ಉಳಿಸಿಕೊಂಡಿದ್ದ ಸುನೇಲ್ ಕುಮಾರ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಹಲವು ಗಂಭೀರ ಆರೋಪಗಳು ಬೆಳಕಿಗೆ ಬಂದಿವೆ. ಬಸ್‌ನೊಳಗೆ ಸುಡುವ ವಾಸನೆ ಬರುತ್ತಿರುವ ಬಗ್ಗೆ ಪ್ರಯಾಣಿಕರು ಚಾಲಕ ಹಾಗೂ ಕಂಡಕ್ಟರ್‌ಗೆ ಮುಂಚಿತವಾಗಿ ಮಾಹಿತಿ ನೀಡಿದ್ದರೂ, ಬಸ್‌ನಲ್ಲಿ ಇಂತಹ ವಾಸನೆ ಬರುವುದು ಸಾಮಾನ್ಯ ಎಂದು ಚಾಲಕ ನಿರ್ಲಕ್ಷ್ಯದಿಂದ ಉತ್ತರಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ, ತಾಂತ್ರಿಕ ದೋಷವನ್ನು ಪರಿಶೀಲಿಸಲು ಚಾಲಕ ತಕ್ಷಣ ಬಸ್ ನಿಲ್ಲಿಸಿರಲಿಲ್ಲ ಮತ್ತು ಚಾಲಕ ಹಾಗೂ ಕಂಡಕ್ಟರ್ ಕ್ಯಾಬಿನ್‌ನಲ್ಲೇ ಕುಳಿತು ಬೀಡಿ ಹಾಗೂ ಸಿಗರೇಟ್ ಸೇದುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಗಂಭೀರ ಆರೋಪಗಳನ್ನು ಮಾಡಲಾಗಿದೆ.
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್


0 ಕಾಮೆಂಟ್‌ಗಳು