(Santhoshvani.com)
ಬೆಳಗಾವಿ: ನಾಗೇಂದ್ರ ಅವರು ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದು, ಈ ವಿಚಾರ ಈಗ ಕ್ಲೋಸ್ ಆಗಿದೆ. ರಾಜ್ಯದಲ್ಲಿನ ನಮ್ಮ ಸರ್ಕಾರ ಸುಭದ್ರವಾಗಿದೆ ಹಾಗೂ ಸುಭದ್ರವಾಗಿರಲಿದೆ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಗೇಂದ್ರ ಅವರ ರಾಜೀನಾಮೆಯಿಂದ ಪಕ್ಷಕ್ಕೆ ಮುಜುಗರವಾಗಿದ್ದು ನಿಜ. ಆದರೆ, ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದಾರೆ. ಈ ಕುರಿತು ಮತ್ತಷ್ಟು ಚರ್ಚೆ ನಡೆಸುವುದು ಅನಾವಶ್ಯಕ. ನಾಗೇಂದ್ರ ಅವರ ಸ್ಥಾನವನ್ನು ಅವರ ಸಮಾಜದವರಿಗೇ ನೀಡಲಾಗುವುದು. ಆದರೆ, ಯಾವಾಗ ನೀಡಬೇಕು ಎಂಬುದನ್ನು ಸರ್ಕಾರ ನಿರ್ಧರಿಸಲಿದೆ ಎಂದರು.
ಬೆಳಗಾವಿ ಜಿಲ್ಲೆ ಇನ್ನೂ ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿಲ್ಲ:
ಕೇಂದ್ರ ಸರ್ಕಾರದ ನಿಯಮಗಳಂತೆ ಪ್ರಕ್ರಿಯೆ ನಡೆಯಬೇಕಾಗಿದೆ.ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಯರಗಟ್ಟಿ ಹಾಗೂ ಸವದತ್ತಿ ತಾಲೂಕುಗಳು ಸದ್ಯ ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿಲ್ಲ. ಮುಂದಿನ ವಾರದಲ್ಲಿ ಈ ಕುರಿತು ಬದಲಾವಣೆಯಾಗುವ ಸಾಧ್ಯತೆಯಿದೆ. ಮಾರ್ಗಸೂಚಿ ಪರಿಷ್ಕರಣೆಗೆ ಮನವಿ ಮಾಡಲಾಗಿದೆ ಎಂದ ಅವರು, ಕೇಂದ್ರದ ಅಧ್ಯಯನ ತಂಡ ಬಂದು ಪರಿಶೀಲಿಸಿ ವರದಿ ನೀಡಲು ಸಮಯ ಬೇಕಾಗುತ್ತದೆ. ಬಳಿಕ ಕೇಂದ್ರ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುತ್ತದೆ. ಬೆಳೆ ವಿಮೆಯನ್ನು ಕೆಲ ರೈತರು ಮಾಡಿಸಿಕೊಂಡಿದ್ದರೆ, ಇನ್ನು ಕೆಲವರು ಮಾಡಿಸಿಕೊಂಡಿಲ್ಲ. ಈ ವಿಚಾರದಲ್ಲಿ ಎಲ್ಲವೂ ಸರಿಯಾಗಿದೆ. ಕಳೆದ ಬಾರಿಯೂ ಕೇಂದ್ರ ಸರ್ಕಾರದ ನೆರವಿಗಾಗಿ ಕಾಯದೆ ರಾಜ್ಯ ಸರ್ಕಾರದಿಂದಲೇ ಪರಿಹಾರ ವಿತರಿಸಲಾಗಿತ್ತು. ಹೀಗಾಗಿ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.
2ನೇ ಹಂತದ ನೀರು ಹರಿಸುವ ಕಾರ್ಯ ನವೆಂಬರ್‌ನಿಂದ ಆರಂಭ:
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ. ಹಿಡಕಲ್ ಜಲಾಶಯ ಭರ್ತಿಯಾಗಿದ್ದು, ಈಗಾಗಲೇ ಎರಡು ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಎರಡನೇ ಹಂತದ ನೀರು ಹರಿಸುವ ಕಾರ್ಯ ನವೆಂಬರ್‌ನಿಂದ ಆರಂಭವಾಗಲಿದೆ. ಕೆಲ ಕಾರಣಗಳಿಂದಾಗಿ ನೀರು ಕಾಲುವೆಗಳ ಕೊನೆಯ ಭಾಗದವರೆಗೆ ತಲುಪುತ್ತಿಲ್ಲ ಎಂದು ತಿಳಿಸಿದರು.
ಡಿಸಿಎಂ ಸ್ಥಾನಕ್ಕೆ ಎಲ್ಲರೂ ಆಕಾಂಕ್ಷಿಗಳೇ:
ರಮೇಶ್ ಜಾರಕಿಹೊಳಿ ಭೇಟಿ ಸಾಮಾನ್ಯ:
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಅವರು ಆರು ತಿಂಗಳಿಗೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಾರೆ. ಇದರಲ್ಲಿ ವಿಶೇಷವೇನಿಲ್ಲ ಎಂದು ಹೇಳಿದರು.
ಶೀಘ್ರದಲ್ಲೇ ಮಹಿಳಾ ಸಚಿವರ ನೇಮಕ: ನಮ್ಮ ಸರ್ಕಾರ ಸುಭದ್ರವಾಗಿದೆ ಹಾಗೂ ಸುಭದ್ರವಾಗಿರಲಿದೆ. ಮಹಿಳಾ ಸಚಿವರನ್ನು ಶೀಘ್ರದಲ್ಲೇ ಪಕ್ಷದ ನಿರ್ಧಾರದಂತೆ ನೇಮಕ ಮಾಡಲಾಗುವುದು. ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಸಾಮಾನ್ಯ ಕಾರ್ಯಕರ್ತರಿಗೆ ನೀಡಲಾಗುವುದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಕಾಂಗ್ರೆಸ್ ನಗರಾಧ್ಯಕ್ಷರ ಆಯ್ಕೆ ಪಟ್ಟಿಯನ್ನು ದೆಹಲಿಗೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್,ಪೊಲೀಸ್ ಕಮಿಷನರ್ ಭೂಷಣ ಗುಲಾಬರಾವ್ ಬೊರಸೆ, ಎಸ್ಪಿ ಕೆ. ರಾಮರಾಜನ್, ಜಿಪಂ ಸಿಇಒ ರಾಹುಲ್ ಶಿಂಧೆ ಇದ್ದರು.
Santhoshvani digital Daily News Network
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ನೆಟ್ವರ್ಕ್


0 ಕಾಮೆಂಟ್‌ಗಳು