ಬೆಳಗಾವಿ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ಶಿಂಧೆ ಅವರ ಮಾರ್ಗದರ್ಶನ ಹಾಗೂ ವಿಶೇಷ ಆಸಕ್ತಿಯಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಅಡಿಯಲ್ಲಿ ಜಿಲ್ಲೆಯಾದ್ಯಂತ ಮಹಿಳಾ ಸ್ವಸಹಾಯ ಸಂಘಗಳ ಆರ್ಥಿಕ ಸಬಲೀಕರಣಕ್ಕಾಗಿ "ಅಕ್ಕ ಕೆಫೆ" ಯೋಜನೆಯನ್ನು ಯಶಸ್ವಿಯಾಗಿ ವಿಸ್ತರಿಸಲಾಗುತ್ತಿದೆ.
ಪ್ರಸ್ತುತ ಜಿಲ್ಲಾ ಪಂಚಾಯತ್ ಬೆಳಗಾವಿ ಆವರಣದಲ್ಲಿರುವ ಅಕ್ಕ ಕೆಫೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸುತ್ತಮುತ್ತಲಿನ ಸರ್ಕಾರಿ ಕಚೇರಿಗಳ ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಮಹಿಳಾ ಸ್ವಸಹಾಯ ಸಂಘದ ಸದಸ್ಯರು ತಯಾರಿಸುವ ಆರೋಗ್ಯಕರ, ಸಾಂಪ್ರದಾಯಿಕ ಹಾಗೂ ಸಿರಿಧಾನ್ಯ ಆಧಾರಿತ ಆಹಾರಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ.
ಜಿಲ್ಲಾ ಪಂಚಾಯತ್ ಸುತ್ತಮುತ್ತ ಕೋರ್ಟ್, ವಾರ್ತಾ ಇಲಾಖೆ, ಭೂದಾಖಲೆಗಳ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳಿದ್ದು, ಇಲ್ಲಿನ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಕೆಲಸಗಳ ನಿಮಿತ್ತ ಆಗಮಿಸುವ ಸಾರ್ವಜನಿಕರು ಊಟ ಹಾಗೂ ಉಪಹಾರಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ಕ ಕೆಫೆಗೆ ಭೇಟಿ ನೀಡುತ್ತಿದ್ದಾರೆ. ಶುಚಿ, ರುಚಿ ಮತ್ತು ಗುಣಮಟ್ಟದ ಸೇವೆಯಿಂದ ಅಕ್ಕ ಕೆಫೆ ಜನಪ್ರಿಯತೆ ಗಳಿಸಿದೆ.
ಬೆಳಗಿನ ಉಪಹಾರಕ್ಕೆ ರುಚಿಯ ಹಬ್ಬ:ಅಕ್ಕ ಕೆಫೆಯಲ್ಲಿ ಬೆಳಗ್ಗೆಯಿಂದಲೇ ಬಿಸಿಬಿಸಿ ಉಪಹಾರಗಳ ತಯಾರಿಕೆ ಆರಂಭವಾಗುತ್ತದೆ. ನವಣಕ್ಕಿ ಇಡ್ಲಿ, ರಾಗಿ ಇಡ್ಲಿ, ಇಡ್ಲಿ-ವಡೆ, ರಾಗಿ ದೋಸೆ, ಮಸಾಲೆ ದೋಸೆ, ನವಣಕ್ಕಿ ಉಪ್ಪಿಟ್ಟು, ಗೋಧಿ ಪೂರಿ, ಪೈನಾಪಲ್ ಶೀರಾ, ಶಾಬೂದಾಣಿ ಕಿಚಡಿ, ಗೋಧಿ ಉಪ್ಪಿಟ್ಟು, ಶಾವಿಗೆ ಉಪ್ಪಿಟ್ಟು ಹಾಗೂ ಪಲಾವ್ ಸೇರಿದಂತೆ ವಿವಿಧ ಆರೋಗ್ಯಕರ ಉಪಹಾರಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.
ಮಧ್ಯಾಹ್ನದ ಊಟಕ್ಕೆ ಮನೆ ಅಡುಗೆಯ ಸವಿ:
ಮಧ್ಯಾಹ್ನದ ವೇಳೆಯಲ್ಲಿ ರಾಗಿ ರೊಟ್ಟಿ, ಜೋಳದ ರೊಟ್ಟಿ, ನುಗ್ಗೆ ಸೊಪ್ಪಿನ ರೊಟ್ಟಿ, ಪಾಲಕ್ ರೊಟ್ಟಿ, ಬೀಟ್‌ರೂಟ್ ರೊಟ್ಟಿ, ಸಜ್ಜೆ ರೊಟ್ಟಿ, ಮೆಂತ್ಯ ರೊಟ್ಟಿ, ಅಗಸಿ ರೊಟ್ಟಿ ಹಾಗೂ ಕರಿಬೇವು ಸೊಪ್ಪಿನ ರೊಟ್ಟಿಗಳೊಂದಿಗೆ ಕಾಯಿ ಪಲ್ಯ, ಕಾಳು ಪಲ್ಯ, ಮೊಸರು, ಶೇಂಗಾ ಚಟ್ನಿ ಹಾಗೂ ಗುರಳ್ಳು ಚಟ್ನಿಯಂತಹ ಸಾಂಪ್ರದಾಯಿಕ ತಿನಿಸುಗಳನ್ನು ಮನೆ ಅಡುಗೆಯ ಸವಿಯೊಂದಿಗೆ ನೀಡಲಾಗುತ್ತಿದೆ.
ಸಂಜೆಯ ಸ್ನ್ಯಾಕ್ಸ್‌ಗೂ ವಿಶೇಷ ಆಕರ್ಷಣೆ':
ಸಂಜೆಯ ವೇಳೆಯಲ್ಲಿ ಭಡಂಗ, ಚುರುಮುರಿ, ಸೂಸಲಾ, ಕಾಂದಾ ಭಜಿ, ಹಾಗಲಕಾಯಿ ಭಜಿ, ಮಿರ್ಚಿ ಭಜಿ, ಸೌತೆಕಾಯಿ ಭಜಿ ಹಾಗೂ ಮೈಸೂರು ಭಜಿ ಸೇರಿದಂತೆ ಹಲವು ಬಗೆಯ ಖಾರದ ತಿನಿಸುಗಳು ಚಹಾದೊಂದಿಗೆ ಗ್ರಾಹಕರಿಗೆ ಲಭ್ಯವಿದ್ದು, ಉತ್ತಮ ಬೇಡಿಕೆ ಪಡೆದಿವೆ.
35ಕ್ಕೂ ಹೆಚ್ಚು ಬಗೆಯ ತಿನಿಸುಗಳು:ಅಕ್ಕ ಕೆಫೆಯಲ್ಲಿ ಬೆಳಗಿನ ಉಪಹಾರದಿಂದ ಮಧ್ಯಾಹ್ನದ ಊಟ ಹಾಗೂ ಸಂಜೆ ತಿಂಡಿವರೆಗೆ ಸುಮಾರು 35ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಗುಣಮಟ್ಟ ಮತ್ತು ಶುಚಿತ್ವದೊಂದಿಗೆ ತಯಾರಿಸುತ್ತಿದ್ದಾರೆ. ಇದರೊಂದಿಗೆ ಚಕ್ಕುಲಿ, ಕರೆಂಜಿ, ಲಾಡು, ಶಂಕರಪಾಳಿ, ಕೋಡಬಳೆ, ನಿಪ್ಪಟ್ಟು ಸೇರಿದಂತೆ ವಿವಿಧ ಮಿಠಾಯಿ ಹಾಗೂ ಖಾರದ ಉತ್ಪನ್ನಗಳಿಗೂ ಉತ್ತಮ ಬೇಡಿಕೆ ವ್ಯಕ್ತವಾಗಿದೆ.
ಗಣ್ಯರ ಮೆಚ್ಚುಗೆ:ಅಕ್ಕ ಕೆಫೆಯ ಗುಣಮಟ್ಟದ ಆಹಾರ ಹಾಗೂ ಮಹಿಳೆಯರ ಸೇವೆಯನ್ನು ಅನೇಕ ಗಣ್ಯರು ಮೆಚ್ಚಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಸತೀಶ್ ಜಾರಕಿಹೊಳಿ, ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸಿಫ್ (ರಾಜು) ಸೇಠ್ ಸೇರಿದಂತೆ ವಿವಿಧ ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಅಕ್ಕ ಕೆಫೆಗೆ ಭೇಟಿ ನೀಡಿ ಆಹಾರವನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ಶಿಂಧೆ ಅವರು ಮಹಿಳಾ ಸ್ವಸಹಾಯ ಸಂಘಗಳಿಗೆ ಶಾಶ್ವತ ಆದಾಯದ ಮೂಲ ಕಲ್ಪಿಸುವುದು, ಸ್ಥಳೀಯ ಆಹಾರ ಸಂಸ್ಕೃತಿಯನ್ನು ಉತ್ತೇಜಿಸುವುದು ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಅಕ್ಕ ಕೆಫೆ ಯೋಜನೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸಲು ವಿಶೇಷ ಆದ್ಯತೆ ನೀಡುತ್ತಿದ್ದಾರೆ.
ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಅಕ್ಕ ಕೆಫೆಗಳು ಮಹಿಳಾ ಉದ್ಯಮಶೀಲತೆ, ಸ್ವಾವಲಂಬನೆ ಹಾಗೂ ಸ್ಥಳೀಯ ಉತ್ಪನ್ನಗಳ ಪ್ರೋತ್ಸಾಹಕ್ಕೆ ಹೊಸ ಆಯಾಮ ನೀಡುತ್ತಿವೆ.
ಜಿಲ್ಲೆಯ ವಿವಿಧೆಡೆ ಅಕ್ಕ ಕೆಫೆಗಳ ವಿಸ್ತರಣೆ:ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯದಲ್ಲಿನ ಅಕ್ಕ ಕೆಫೆಯ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಅಲ್ಲದೆ ನಗರದ ಪೊಲೀಸ್ ಆಯುಕ್ತರ ಕಚೇರಿ ಆವರಣ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಚೇರಿ ಆವರಣದಲ್ಲಿ ಅಕ್ಕ ಕೆಫೆ ಕಟ್ಟಡಗಳ ನಿರ್ಮಾಣ ಪ್ರಗತಿಯಲ್ಲಿದೆ. ಬೈಲಹೊಂಗಲ, ಚಿಕ್ಕೋಡಿ, ಹುಕ್ಕೇರಿ, ಖಾನಾಪುರ ಹಾಗೂ ಸವದತ್ತಿ ತಾಲ್ಲೂಕುಗಳಲ್ಲಿಯೂ ಅಕ್ಕ ಕೆಫೆ ನಿರ್ಮಾಣ ಕಾಮಗಾರಿಗಳು ಆರಂಭವಾಗಲಿವೆ.
“ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಅಕ್ಕ ಕೆಫೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಗುಣಮಟ್ಟದ ಹಾಗೂ ರುಚಿಕಟ್ಟಾದ ಊಟ-ಉಪಹಾರಗಳಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ. ಮುಂದಿನ ದಿನಗಳಲ್ಲಿ ನಗರದ ಇನ್ನೆರಡು ಸ್ಥಳಗಳಲ್ಲಿ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲೂ ಅಕ್ಕ ಕೆಫೆಗಳು ಕಾರ್ಯಾರಂಭಗೊಳ್ಳಲಿವೆ.”
ರಾಹುಲ್ ಶಿಂಧೆ ಸಿಇಓ. ಜಿಪಂ ಬೆಳಗಾವಿ.
Santoshvani Digital Daily News portal
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ಪೋರ್ಟಲ್


0 ಕಾಮೆಂಟ್‌ಗಳು