ಶಾಲೆಬಿಟ್ಟ ಮಕ್ಕಳಿಗೆ ಪರೀಕ್ಷೆ ನೋಂದಣಿಗೆ ಕ್ರಮ: ಕೆ.ವಿದ್ಯಾ


ಬೆಂಗಳೂರು: 'ಶಾಲೆಯಿಂದ ಹೊರಗುಳಿದ 15 ವರ್ಷ ಮೇಲ್ಪಟ್ಟ ಮಕ್ಕಳನ್ನು ಕರ್ನಾಟಕ ಮುಕ್ತ ಶಾಲೆ (ಕೆಒಎಸ್) ಮೂಲಕ ಸೆಕೆಂಡರಿ ಮತ್ತು ಸೀನಿಯರ್ ಸೆಕೆಂಡರಿ ಪರೀಕ್ಷೆಗೆ ನೋಂದಾಯಿಸಲು ಕ್ರಮ ತೆಗೆದುಕೊಳ್ಳಲಾಗಿದೆ' ಎಂದು ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕಿ ಕೆ.ವಿದ್ಯಾ ತಿಳಿಸಿದ್ದಾರೆ.
'ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ 15 ವರ್ಷ ಮೇಲ್ಪಟ್ಟ 64,573 ಮಕ್ಕಳುಇದ್ದಾರೆ. 2026-27ನೇ ಸಾಲಿನಲ್ಲಿ ಈ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಮರುಕರೆತರಲು ರಾಜ್ಯ ಸರ್ಕಾ ರವು, ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವಕ್ಕೆ ಅನುಮೋದನೆ ದೊರೆತಿದ್ದು, ಪ್ರತಿ ಮಗುವಿಗೆ 2,000ದಂತೆ ಒಟ್ಟು 12.91 ಕೋಟಿ ವೆಚ್ಚ ಮಾಡಲು ಒಪ್ಪಿಗೆ ನೀಡಿದೆ' ಎಂದು ಮಾಹಿತಿ ನೀಡಿದ್ದಾರೆ.

 *2026ರ ಮಾರ್ಚ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸಿಕೊಂಡು, ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳ ಮಾಹಿತಿಯನ್ನು ಕರ್ನಾಟಕ ಶಾಲಾ
ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯಿಂದ ಪಡೆದುಕೊಳ್ಳಲಾಗಿದೆ. ಅದರಂತೆ ರಾಜ್ಯದಲ್ಲಿ ಸೆಕೆಂಡರಿ ಪರೀಕ್ಷೆಗೆ ನೋಂದಾಯಿಸಲು 38,469 ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ' ಎಂದು ವಿವರಿಸಿದ್ದಾರೆ. 'ಶಾಲೆಯಿಂದ ಹೊರಗುಳಿದ ಪಟ್ಟಿಯಲ್ಲಿರುವ ಮಕ್ಕಳನ್ನು ಪತ್ತೆಮಾಡಿ, ಅವರ ವಿವರಗಳನ್ನು ದೃಢೀಕರಿಸಿಕೊಳ್ಳಬೇಕು. 

ಈ ಪರೀಕ್ಷೆಯ ಮಹತ್ವವನ್ನು ಮಕ್ಕಳು ಮತ್ತು ಅವರ ಪೋಷಕರಿಗೆ ಮನವರಿಕೆ ಮಾಡಿಸಬೇಕು. ಮಕ್ಕಳಿಗಾಗಿ ಬ್ಲಾಕ್‌ಮಟ್ಟದಲ್ಲಿ ಕಾರ್ಯಾಗಾರ ನಡೆಸಬೇಕು. ಪರೀಕ್ಷೆಯ ಮಾಧ್ಯಮ, ವಿಷಯಗಳ ಆಯ್ಕೆ ಹಾಗೂ ಡಿಜಿಟಲ್ ವೇದಿಕೆಗಳ ಬಳಕೆ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು. ಪರೀಕ್ಷೆಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಮಗ್ರ ಶಿಕ್ಷಣ ಅಭಿಯಾನದ ಯೋಜನೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದಿದ್ದಾರೆ.



0 ಕಾಮೆಂಟ್‌ಗಳು