ದಾವಣಗೆರೆ:ಹೆಣ್ಣು ಹುಟ್ಟುತ್ತಲೇ ನಾಯಕಿ ಆದರೆ ಅವಳಿಗೆ ಸೂಕ್ತ ಅವಕಾಶಗಳು ಸಿಗಬೇಕಷ್ಟೇ. ಅವಕಾಶಗಳು ಲಭಿಸಿದರೆ ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಪ್ರತಿಪಾದಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಲ್ಲಿನ ಕುವೆಂಪು ಕನ್ನಡಭವನದಲ್ಲಿ ಆಯೋಜಿಸಲಾಗಿದ್ದ ಪ್ರಥಮ ಜಿಲ್ಲಾ ಮಹಿಳಾ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಪುರುಷ ಪ್ರಾಧಾನ್ಯತೆ ಹೆಚ್ಚಾಗಿದ್ದು, ಮಹಿಳೆಯರು ಎಷ್ಟೇ ಸಾಧನೆ ಮಾಡಿದರೂ ಅವರನ್ನು ಪಕ್ಕಕ್ಕೆ ಸರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಿಜವಾದ ಗಂಡಸ್ತನ ಎಂದರೆ ನಾನು ಹೆಚ್ಚು ಎಂಬ ಅಹಂ ಅಲ್ಲ, ಬದಲಾಗಿ ಮಾತೃಹೃದಯವನ್ನು ಹೊಂದಿ, ಮಹಿಳೆಯರಿಗೆ ಗೌರವ ನೀಡಿ, ಅವರನ್ನು ಪ್ರೋತ್ಸಾಹಿಸಿ ಅರ್ಧನಾರೀಶ್ವರನಂತೆ ಜೊತೆಯಲ್ಲಿರುವುದೇ ಆಗಿದೆ ಎಂದು ತಿಳಿಸಿದರು.
ಪ್ರಸ್ತುತ ಸಮಾಜದಲ್ಲಿ ಬಾಲ್ಯ ವಿವಾಹ, ಪೋಕೋ ಪ್ರಕರಣಗಳು ಹಾಗೂ ಭ್ರೂಣ ಹತ್ಯೆಯಂತಹ ಗಂಭೀರ ಸಮಸ್ಯೆಗಳು ಜೀವಂತವಾಗಿವೆ. ದೇಶದಲ್ಲಿ ಸುಮಾರು 90 ಲಕ್ಷ ಹೆಣ್ಣು ಭ್ರೂಣ ಹತ್ಯೆಗಳಾಗಿರುವುದು ಆತಂಕಕಾರಿ ವಿಷಯ. ಹೆಣ್ಣು ಮಗವನ್ನ ಗರ್ಭಾವಸ್ಥೆಯಲ್ಲಿಯೇ ಚಿವುಟಿ ಕೊಲ್ಲುವ ಪ್ರವೃತ್ತಿ ಕೊನೆಯಾಗಬೇಕು. ಇಂತಹ ಸಾಮಾಜಿಕ
ಅನ್ಯಾಯಗಳು ಮತ್ತು ಅನೈತಿಕ ವ್ಯವಸ್ಥೆಯ ವಿರುದ್ಧ ಮಹಿಳಾ ಸಾಹಿತಿಗಳ ಲೇಖನಿ ಕ್ರಾಂತಿಕಾರಿ ರೀತಿಯಲ್ಲಿ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು. ನಾಗಮ್ಮ ಕೇಶವಮೂರ್ತಿ ಅವರು ಶಾಸಕರಾಗಿ ಹಾಗೂ ಸಚಿವರಾಗಿ ಮಹಿಳಾ ತಂಡವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅದೇ ರೀತಿ ಸಾಹಿತ್ಯ ಮತ್ತು ಸಮಾಜಮುಖಿ ಕ್ಷೇತ್ರದಲ್ಲಿ ಟಿ. ಗಿರಿಜಾ, ಕಿರುವಾಡಿ ಗಿರಿಜಮ್ಮ ಹಾಗೂ ಹರಿಹರದ ಡಾ. ಗಿರಿಜಮ್ಮ ಅವರ ಕೊಡುಗೆ ಅಪಾರ. ಡಾ. ಗಿರಿಜಮ್ಮ ಅವರ ಕಾದಂಬರಿಗಳು ಚಲನಚಿತ್ರಗಳಾಗಿಯೂ ಪ್ರಸಿದ್ದಿ ಪಡೆದಿವೆ ಎಂದು ಕೊಂಡಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ತಾಯಿ ಭುವನೇಶ್ವರಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು.ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಪ್ರಧಾನ
ಸಂಚಾಲಕರಾದ ಲೀಲಾಜಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ದಿಕ್ಕೂಚಿ ಭಾಷಣ ಮಾಡಿದರು. ಸಮ್ಮೇಳನದ ಪ್ರಧಾನ ಸಂಚಾಲಕರಾದ ವೀಣಾ ಕೃಷ್ಣಮೂರ್ತಿ ಆಶಯ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ತಿಪ್ಪಮ್ಮ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಡಾ. ಎ.ಜೆ. ನೀತಾ ಬಿ.ಇ. ರಂಗಸ್ವಾಮಿ, ಕಿರುವಾಡಿ ಗಿರಿಜಮ್ಮ. ವೀಣಾ ನಂಜಪ್ಪ, ಜಯಮ್ಮ ನೀಲಗುಂದ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಮ್ಮೇಳನದ ನಿರ್ಣಯಗಳು.
1. ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಧಾನಸಭೆ ಮತ್ತು ಲೋಕಸಭೆಯ ವರೆಗೆ ಎಲ್ಲಾ ಪ್ರಜಾಪ್ರತಿನಿಧಿಗಳ ಸಭೆಗಳಲ್ಲಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದಿಂದ ಹಿಡಿದು ರಾಜ್ಯ ಗಡಿ ನಾಡು ಮತ್ತು ಹೊರ ನಾಡು ಘಟಕಗಳಲ್ಲಿ ಮಹಿಳೆಯರಿಗೆ ಶೇಕಡ 50 ರಷ್ಟು ಮೀಸಲಾತಿಯನ್ನು ಕಲ್ಪಿಸಿಕೊಡಬೇಕೆಂದು ಹಕ್ಕೊತ್ತಾಯ ಮಂಡಿಸುತ್ತೇವೆ.
2. ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯಾಲಯಗಳಲ್ಲಿ ಶೀಘ್ರ ನ್ಯಾಯ ಸಿಗಬೇಕೆಂದು ಆಗ್ರಹಪಡಿಸುತ್ತೇವೆ.
3. ದೃಶ್ಯ ಮಾಧ್ಯಮದಲ್ಲಿ ಮಹಿಳೆಯರನ್ನು ಅಶ್ಲೀಲವಾಗಿ ಪ್ರದರ್ಶಿಸುವುದನ್ನು ಖಂಡಿಸುತ್ತೇವೆ. ಕಾನೂನಾತ್ಮಕವಾಗಿ ಇದನ್ನು ತಡೆಗಟ್ಟಬೇಕಾಗಿ ಒತ್ತಾಯಿಸುತ್ತೇವೆ.
0 ಕಾಮೆಂಟ್‌ಗಳು