ವಿಜಯಪುರ: ಜಿಲ್ಲೆಯಾದ್ಯಂತ ಎದುರಾಗಿರುವ ಬರಪರಿಸ್ಥಿತಿ ಹಾಗೂ ಬೆಳೆ ಪರಿಸ್ಥಿತಿ ಖುದ್ದು ವೀಕ್ಷಿಸಲು ಭಾನುವಾರ ಭೇಟಿ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಡಾ. ಎಂ.ಬಿ. ಪಾಟೀಲ್ ಅವರು, ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದಿಂದ ಸೂಕ್ತ ನೆರವು ಒದಗಿಸುವ ಸಕಾರಾತ್ಮಕ ಭರವಸೆ ನೀಡಿದ್ದಾರೆ. ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರ ಅವಲೋಕನಾ ಪ್ರವಾಸ ಕೈಗೊಂಡ ಸಚಿವರು, ಹಿಟ್ಟಿನಹಳ್ಳಿ ವ್ಯಾಪ್ತಿಯ ಕೃಷಿಕರ ತಾಕುಗಳಿಗೆ ತೆರಳಿ ಹತ್ತಿ ಸೇರಿದಂತೆ ವಿವಿಧ ಬೆಳೆಗಳ ಪ್ರಸ್ತುತ ಸ್ಥಿತಿಯನ್ನು ಅವಲೋಕಿಸಿದರು
ಮಳೆ ಅಭಾವದಿಂದಾಗಿ ಬೆಳೆಗಳ ಬೆಳವಣಿಗೆ ಕುಂಠಿತಗೊಂಡು ಬಿತ್ತನೆ ಮಾಡಿದ ಪೈರು ಒಣಗುತ್ತಿರುವುದನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದ ಸಚಿವರು, ಸ್ಥಳದಲ್ಲಿದ್ದ ರೈತರು ಹಾಗೂ ಕೃಷಿ ಅಧಿಕಾರಿಗಳಿಂದ ಬೆಳೆ ಹಾನಿ ಸಮಗ್ರ ಮಾಹಿತಿ ಪಡೆದುಕೊಂಡರು.
ರೈತರ ಅಹವಾಲುಗಳನ್ನು ಅತ್ಯಂತ ತಾಳ್ಮೆಯಿಂದ ಆಲಿಸಿದ ಸಚಿವ ಡಾ. ಎಂ.ಬಿ. ಪಾಟೀಲ್ ಅವರು, ಜಿಲ್ಲೆಯಾದ್ಯಂತ ಭೇಟಿ ನೀಡಿ ಮಳೆ ಹಾಗೂ ಬೆಳೆ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ಸುದೀರ್ಘ ವೀಕ್ಷಣೆ ನಡೆಸಿ ಪೂರ್ಣ ಪ್ರಮಾಣದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ವರದಿ ಸಲ್ಲಿಕೆಯಾದ ತಕ್ಷಣ ಸರ್ಕಾರವು ಸೂಕ್ತ ನಿರ್ಧಾರ ಕೈಗೊಂಡು ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆ.
ಈ ಸಂದರ್ಭದಲ್ಲಿ ನಾಗಠಾಣ ಮತ ಕ್ಷೇತ್ರದ ಶಾಸಕರಾದ ವಿಠಲ ಕಟಕದೊಂಡ ಜಿಲ್ಲಾಧಿಕಾರಿಗಳಾದ ಡಾ. ಆನಂದ್ ಕೆ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ,ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಪಾಟೀಲ,ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಸಿದ್ದರಾಮ ಬರಗಿಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ರೈತರು ಸಾರ್ವಜನಿಕರು ಉಪಸ್ಥಿತರಿದ್ದರು.
Santhoshvani Digital Daily News portal
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ಪೋರ್ಟಲ್


0 ಕಾಮೆಂಟ್‌ಗಳು