ಹಾಸನ 2028ರ ಚುನಾವಣೆಗೆ ದಾಳ ಉರುಳಿಸಿದರೇ ಕುಮಾರಸ್ವಾಮಿ ಮುಂದಿನ ಚುನಾವಣೆಯ ರಣತಂತ್ರವೇನು



ಹಾಸನ: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಉರುಳಿಸಿರುವ ದಾಳ ಇದೀಗ ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ತಳಮಳಕ್ಕೆ ಕಾರಣವಾಗಿದೆ. ಅಸಮಾಧಾನಿತರು, ನೋವು ಅನುಭವಿಸುತ್ತಿರುವವರಿಗೆ ಜೆಡಿಎಸ್ ಬಾಗಿಲು ತೆರೆದಿದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ, ಕಾಂಗ್ರೆಸ್‌ನ ಮುಖಂಡರಿಗೆ ಗಾಳ ಹಾಕಿದ್ದಾರೆ ಎನ್ನುವ ವಿಶ್ಲೇಷಣೆಗಳು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.


ಕಾಂಗ್ರೆಸ್ ಜಿಲ್ಲಾ ಘಟಕದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಈಗಾಗಲೇ ಬಹಿರಂಗವಾಗಿದೆ. ಅತೃಪ್ತ ಮುಖಂಡರು, ಪ್ರತ್ಯೇಕ ಸಭೆ ನಡೆಸಿ, ಅಸಮಾಧಾನ ಹೊರಹಾಕಿರುವುದು ಗುಟ್ಟಾಗಿ ಉಳಿದಿಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತಿರುವ ಅಭ್ಯರ್ಥಿಗಳಿಗೇ ಕಾಂಗ್ರೆಸ್ ವರಿಷ್ಠರು ಮಣೆ ಹಾಕುತ್ತಿದ್ದಾರೆ ಎನ್ನುವ ಅತೃಪ್ತಿ ಜಿಲ್ಲೆಯ ಹಿರಿಯ ಕಾಂಗ್ರೆಸ್ಸಿಗರಲ್ಲಿದೆ.
ಅದಕ್ಕೆ ಪುಷ್ಠಿ ನೀಡುವಂತೆ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರನ್ನಾಗಿ ಸೋತ ಅಭ್ಯರ್ಥಿಗಳನ್ನೇ
ಬಹುತೇಕ ಕಡೆಗಳಲ್ಲಿ ನೇಮಕಾತಿ ಮಾಡಲಾಗಿದೆ.

 ಜೊತೆಗೆ ಮುಖ್ಯಮಂತ್ರಿ, ಸಚಿವರು ಸೇರಿದಂತೆ ಕಾಂಗ್ರೆಸ್ ರಾಜ್ಯ ನಾಯಕರು ಬಂದಾಗ, ಇದೇ ಅಭ್ಯರ್ಥಿಗಳು ಎಲ್ಲೆಡೆ ಕಾಣಿಸಿಕೊಳ್ಳುತ್ತಿರುವುದೂ ಹಿರಿಯ ಕಾಂಗ್ರೆಸ್ಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಜೆಡಿಎಸ್‌ನಿಂದ ಮುನಿಸಿಕೊಂಡು ಕಾಂಗ್ರೆಸ್‌ಗೆ ಹೋಗಿರುವ ಶಿವಲಿಂಗೇಗೌಡರು ಸಚಿವರಾಗುತ್ತಿದ್ದಂತೆಯೇ ಎಚ್.ಡಿ. ಕುಮಾರಸ್ವಾಮಿ ಇದೀಗ ತಮ್ಮ ದಾಳವನ್ನು ಉರುಳಿಸಿರುವುದು ಬಹುತೇಕ ಕಾಂಗ್ರೆಸ್ ನಾಯಕರಲ್ಲಿ
ತಳಮಳಕ್ಕೆ ಕಾರಣವಾಗಿದೆ. 

ಮೂರು ಬಾರಿ ಜೆಡಿಎಸ್‌ನಿಂದ ಗೆದ್ದಿದ್ದ ಶಿವಲಿಂಗೇಗೌಡರು, ತಮ್ಮ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಪಕ್ಷವನ್ನು ಉಪಯೋಗಿಸಿಕೊಂಡಿದ್ದಾರೆ. ಇದೀಗ ಅಧಿಕಾರದ ಆಸೆಗೆ ಕಾಂಗ್ರೆಸ್ ಸೇರಿದ್ದಾರೆ ಎನ್ನುವ ಆಪಾದನೆಗಳು ಜೆಡಿಎಸ್ ನಾಯಕರಿಂದ ಕೇಳಿ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಹೇಳಿಕೆ, ಪರೋಕ್ಷವಾಗಿ ಶಿವಲಿಂಗೇಗೌಡರಿಗೆ ಸವಾಲು ಎಸೆಯುವಂತಿದೆ ಎನ್ನುತ್ತಾರೆ ಜಿಲ್ಲೆಯ ರಾಜಕೀಯ ಮುಖಂಡರು.


2028ರ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿರುವ ಎಚ್‌ಡಿಕೆ ಜಿಲ್ಲೆಯ ಅತೃಪ್ತ ಕಾಂಗ್ರೆಸ್ ಮುಖಂಡರನ್ನು ಸೆಳೆಯುವ ಸಿದ್ಧತೆ ಆರಂಭಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಮತ್ತೆ ಜೆಡಿಎಸ್ ವೈಭವ ಮರಳುವಂತೆ ಮಾಡುವ ಆಲೋಚನೆಯಲ್ಲಿದ್ದಾರೆ. ಅದಕ್ಕಾಗಿಯೇ ನೋವು ಅನುಭವಿಸುತ್ತಿರುವವರಿಗೆ ಜೆಡಿಎಸ್ ಪಕ್ಷದಲ್ಲಿ ನೆರವು ಸಿಗಲಿದೆ ಎನ್ನುವ ಮಾತನ್ನು ಕುಮಾರಸ್ವಾಮಿ ಹೇಳಿದ್ದಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.














Santhoshvani Digital Daily News portal
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ಪೋರ್ಟಲ್ 

0 ಕಾಮೆಂಟ್‌ಗಳು