ರೈಲ್ವೆ ಜಾಲತಾಣಗಳಲ್ಲಿ ಕನ್ನಡಕ್ಕೂ ಸ್ಥಾನ ನೀಡಿ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಬಿಳಿಮಲೆ ಆಗ್ರಹ


ಬೆಂಗಳೂರು:ಸಚಿವಾಲಯವು ದೇಶದ ವಿವಿಧ ರೈಲ್ವೆ ವಲಯಗಳ ಜಾಲತಾಣಗಳನ್ನು ಇಂಗ್ಲಿಷ್ ಜೊತೆಯಲ್ಲಿ ಹಿಂದಿಯಲ್ಲಿಯೂ ಆರಂಭಿಸಿದ್ದು, ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಿಗೂ ಜಾಲತಾಣಗಳಲ್ಲಿ ಸಮಾನ ಆದ್ಯತೆ ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಆಗ್ರಹಿಸಿದ್ದಾರೆ. ಈ ಕುರಿತು ಪತ್ರ ಬರೆದಿರುವ ಬಿಳಿಮಲೆ, ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಬಹುಭಾಷಿಕ ಪರಂಪರೆಗೆ ಅನುಗುಣವಾಗಿ ರಾಜ್ಯಗಳ ಅಧಿಕೃತ ಭಾಷೆಗಳಿಗೂ ರೈಲ್ವೆ ಜಾಲತಾಣಗಳಲ್ಲಿ ಅವಕಾಶ ಕಲ್ಪಿಸಬೇಕೆಂದಿದ್ದಾರೆ. 

ಕರ್ನಾಟಕದಂತಹ ಕನ್ನಡ ಭಾಷಿಕ ರಾಜ್ಯಗಳಲ್ಲಿ ರೈಲ್ವೆ ಸೇವೆಗಳನ್ನು ಬಳಸುವ ಲಕ್ಷಾಂತರ ಪ್ರಯಾಣಿಕರ ಅನುಕೂಲಕ್ಕಾಗಿ ಕನ್ನಡದಲ್ಲಿಯೂ ಜಾಲತಾಣ ಸೇವೆಗಳನ್ನು ಒದಗಿಸುವುದು ಅಗತ್ಯವಾಗಿದೆ ಎಂದಿರುವ ಬಿಳಿಮಲೆ, ಇದರಿಂದ ಸಾರ್ವಜನಿಕರಿಗೆ ಮಾಹಿತಿ ಸುಲಭವಾಗಿ ದೊರೆಯುವುದಲ್ಲದೇ, ಇದು ಆಡಳಿತದಲ್ಲಿ ಭಾಷಾ ಸಮಾನತೆಯನ್ನು ಸಾಧಿಸಲು ಉತ್ತೇಜಿಸಲಿದೆ ಎಂದಿದ್ದಾರೆ.

ಭಾರತದ ಭಾಷಾ ವೈವಿಧ್ಯತೆ ಮತ್ತು ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ಗೌರವಿಸುವ ನಿಟ್ಟಿನಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಜೊತೆಗೆ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿಯೂ ರೈಲ್ವೆ ಜಾಲತಾಣಗಳನ್ನು ಅಭಿವೃದ್ಧಿಪಡಿಸುವಂತೆ ಬಿಳಿಮಲೆ ಮನವಿ ಮಾಡಿದ್ದಾರೆ







0 ಕಾಮೆಂಟ್‌ಗಳು